ADVERTISEMENT

ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಯೂಟ್ಯೂಬ್, ಟ್ವಿಟರ್ ಪೋಸ್ಟ್‌ಗೆ ನಿರ್ಬಂಧ

ಪಿಟಿಐ
Published 21 ಜನವರಿ 2023, 16:03 IST
Last Updated 21 ಜನವರಿ 2023, 16:03 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾ ದಿ ಮೋದಿ ಕ್ವೆಶನ್’ಗೆ ಸಂಬಂಧಿಸಿದ ಹಲವು ಯೂಟ್ಯೂಬ್ ವಿಡಿಯೊಗಳು ಮತ್ತು ಲಿಂಕ್‌ಗಳನ್ನು ಹಂಚಿಕೊಂಡಿರುವ ಟ್ವೀಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.

2002ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತಹ ಕೆಲವು ವಿಷಯಗಳ ತನಿಖೆಯ ವಿಷಯವಿದು ಎಂದು ಎರಡು ಕಂತಿನ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಆದರೆ, ಇದನ್ನು ತಳ್ಳಿಹಾಕಿರುವ ವಿದೇಶಾಂಗ ಸಚಿವಾಲಯವು, ಇದೊಂದು ಅಪಪ್ರಚಾರದ ಉದ್ದೇಶ ಹೊಂದಿರುವ ಸಾಕ್ಷ್ಯಚಿತ್ರ ಮತ್ತು ವಸ್ತುನಿಷ್ಠವಲ್ಲದ ಹಾಗೂ ವಸಾಹತುಶಾಹಿ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂದು ಹೇಳಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ, ಐಟಿ ನಿಯಮಾವಳಿ 2021ರ ಅನ್ವಯ ತುರ್ತು ಅಧಿಕಾರವನ್ನು ಬಳಸಿಕೊಂಡು ಸಾಕ್ಷ್ಯಚಿತ್ರದ ವಿಡಿಯೊ ಮತ್ತು ಪೋಸ್ಟ್‌ಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ವಿದೇಶಾಂಗ ಇಲಾಖೆ, ಗೃಹ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಹಿರಿಯ ಅಧಿಕಾರಿಗಳು ಸಾಕ್ಷ್ಯಚಿತ್ರದ ಬಗ್ಗೆ ಪರಿಶೀಲನೆ ನಡೆಸಿದ್ದು, ಇದು ಸುಪ್ರೀಂ ಕೋರ್ಟ್‌ನ ಅಧಿಕಾರ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಅಪಪ್ರಚಾರ ಮಾಡುವ, ವಿವಿಧ ಭಾರತೀಯ ಸಮುದಾಯಗಳಲ್ಲಿ ಒಡಕು ಮೂಡಿಸುವ ಮತ್ತು ಭಾರತದಲ್ಲಿ ವಿದೇಶಿ ಸರ್ಕಾರಗಳ ಕ್ರಮಗಳ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುವ ಪ್ರಯತ್ನವಾಗಿದೆ ಎಂದು ತಿಳಿದುಬಂದಿದೆ.

‘ಈ ಸಾಕ್ಷ್ಯಚಿತ್ರದಿಂದ ವಿವಿಧ ರಾಷ್ಟ್ರಗಳೊಂದಿಗಿನ ಬಾಂಧವ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ಅಧಿಕಾರಿಗಳಿಗೆ ಮನದಟ್ಟಾಗಿದೆ. ಹೀಗಾಗಿ 50ಕ್ಕೂ ಅಧಿಕ ಟ್ವೀಟ್‌ಗಳನ್ನು ತಡೆಹಿಡಿಯುವಂತೆ ಟ್ವಿಟರ್‌ಗೆ ನಿರ್ದೇಶಿಸಲಾಗಿದೆ. ಇದರಲ್ಲಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಿಯಾನ್‌ ಅವರ ಟ್ವೀಟ್‌ ಕೂಡ ಸೇರಿದೆ’ ಎಂದೂ ತಿಳಿಸಿವೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಡೆಗೆ ವಿರೋಧ ಪಕ್ಷಗಳಿಂದ ಕಟು ಟೀಕೆ ವ್ಯಕ್ತವಾಗಿದೆ. ‘ಮೋದಿ ಅವರು ಅಲ್ಪಸಂಖ್ಯಾತರನ್ನು ಎಷ್ಟು ದ್ವೇಷಿಸುತ್ತಾರೆ ಎಂಬುದು ಈ ಸಾಕ್ಷ್ಯಚಿತ್ರದಿಂದ ಜಗಜ್ಜಾಹೀರಾಗಿದೆ’ ಎಂದು ಅವು ಕಿಡಿಕಾರಿವೆ.

‘ಜನಸಮೂಹ ವೀಕ್ಷಿಸದೇ ಇರುವ ಸಾಕ್ಷ್ಯಚಿತ್ರದ ಕುರಿತು ಮೋದಿ ಸರ್ಕಾರ ಏಕೆ ಇಷ್ಟೊಂದು ಗಾಬರಿಗೊಂಡಿದೆ. ಭಾರತದ ನಾಗರಿಕರು ಬಿಬಿಸಿ ಪ್ರಯೋಗಿಸಿರುವ ಇಂಗ್ಲಿಷ್‌ ಅರ್ಥಮಾಡಿಕೊಳ್ಳಬಹುದು ಎಂಬ ಆತಂಕವೇ’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

‘ಬಿಬಿಸಿ ನಿರ್ಮಾಣ ಮಾಡಿರುವ ಹೊಸ ಸಾಕ್ಷ್ಯಚಿತ್ರವು ಅಪಪ್ರಚಾರದ ಉದ್ದೇಶ ಹೊಂದಿದೆ ಎಂದು ಪ್ರಧಾನಿ ಮೋದಿ ಹಾಗೂ ಅವರ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರೋತ್ತರ ಹತ್ಯಾಕಾಂಡದ ನಂತರ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮೋದಿ ಅವರಿಗೆ ರಾಜಧರ್ಮವನ್ನು ನೆನಪಿಸಿದ್ದೇಕೆ. ಅವರಿಂದ ರಾಜೀನಾಮೆ ಕೇಳಿದ್ದೇಕೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಟ್ವೀಟ್‌ ಮೂಲಕ ‍ಪ್ರಶ್ನಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿಗಳ ಟೀಕೆ

13 ಮಂದಿ ನಿವೃತ್ತ ನ್ಯಾಯಮೂರ್ತಿಗಳು, 133 ಮಂದಿ ಮಾಜಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಹಾಗೂ 156 ಮಂದಿ ಮುತ್ಸದ್ಧಿಗಳು ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿದ್ದು, ಈ ಸಂಬಂಧ ಶನಿವಾರ ಜಂಟಿ ಪ್ರಕಟಣೆ ಹೊರಡಿಸಿದ್ದಾರೆ.

‘ಗೋಧ್ರೋತ್ತರ ಹತ್ಯಾಕಾಂಡದಲ್ಲಿ ಮೋದಿ ಪಾತ್ರವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು. ಮೋದಿ ನೇತೃತ್ವದ ಗುಜರಾತ್‌ ಸರ್ಕಾರದ ವಿರುದ್ಧ ನಿಷ್ಕ್ರಿಯತೆಯ ಆರೋಪವೂ ಕೇಳಿಬಂದಿತ್ತು. ಅದನ್ನೂ ನ್ಯಾಯಾಲಯ ತಳ್ಳಿಹಾಕಿತ್ತು. ಆದರೆ ಈ ವಿಚಾರಗಳನ್ನು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿಲ್ಲ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ (ಸಿಎಎ) ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಈ ಸಾಕ್ಷ್ಯಚಿತ್ರ ಹಿಂದಿನ ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ಮೂಲ ಮಾದರಿಯಂತಿದೆ’ ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.