ADVERTISEMENT

ಸುರಕ್ಷತೆ ಇಲ್ಲದಿದ್ದರೆ ಕೇಬಲ್‌ ಟಿವಿ ನೆಟ್‌ವರ್ಕ್‌ ಪರವಾನಗಿ ರದ್ದು

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 14:23 IST
Last Updated 12 ಜನವರಿ 2019, 14:23 IST
   

ನವದೆಹಲಿ: ಸುರಕ್ಷತೆಇಲ್ಲದಿದ್ದರೆ ಕೇಬಲ್‌ ಟಿವಿ ನೆಟ್‌ವರ್ಕ್‌ಗಳಿಗೆ ನೀಡಿದ ಪರವಾನಗಿಯನ್ನುಕೇಂದ್ರ ಸರ್ಕಾರ ಯಾವುದೇ ನೋಟಿಸ್‌ ನೀಡದೆ ರದ್ದುಪಡಿಸಬಹುದು ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಕೇಬಲ್‌ ಟಿವಿ ನೆಟ್‌ವರ್ಕ್‌ ಕಂಪನಿಗೆ ಈ ಸಂಬಂಧ ನೋಟಿಸ್‌ ನೀಡುವುದು ಅಥವಾ ವಿಚಾರಣೆ ನಡೆಸುವುದು ಕಡ್ಡಾಯವಲ್ಲ ಎಂದು ನ್ಯಾಯಮೂರ್ತಿಗಳಾದ ಮನೋಹರ್‌ ಸಪ್ರೆ ಮತ್ತು ಇಂದು ಮಲ್ಹೋತ್ರಾ ಅವರಿದ್ದ ಪೀಠವು ಹೇಳಿದೆ.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌(ತಿದ್ದುಪಡಿ) ನಿಯಮಗಳು 2012ರ ರೂಲ್ 11 ಸಿ ನಿಬಂಧನೆಗಳ ಪ್ರಕಾರ ಸುರಕ್ಷತೆ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಪೀಠವು ತೀರ್ಮಾನಿಸಿದೆ.

ADVERTISEMENT

‘ಕೇಬಲ್‌ ಟಿ.ವಿ ನೆಟ್‌ವರ್ಕ್‌ಗೆ ಅನುಮತಿ ನೀಡುವುದು ಸಂಬಂಧಪಟ್ಟ ಸಚಿವಾಲಯದ ಸುರಕ್ಷತಾ ಅನುಮೋದನೆಗೆ ಒಳಪಟ್ಟಿದೆ. ಷರತ್ತುಬದ್ಧ ಅನುಮತಿ ನೀಡುವುದು ಅಥವಾ ರದ್ದುಪಡಿಸುವ ಅಧಿಕಾರವನ್ನು ಸಂಬಂಧಿಸಿದ ಪ್ರಾಧಿಕಾರ ಹೊಂದಿರುತ್ತದೆ’ ಎಂದು ಕೋರ್ಟ್ ಹೇಳಿದೆ.

2015ರ ಸೆಪ್ಟೆಂಬರ್ 3ರಂದು ಬಾಂಬೆ ಹೈಕೋರ್ಟ್‌ ನೀಡಿದ ತೀರ್ಪಿನ ವಿರುದ್ಧ ಡಿಜಿ ಕೇಬಲ್ ನೆಟ್‌ವರ್ಕ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಡಿಜಿಟಲ್ ವಿಳಾಸ ಸಾಧನ ವ್ಯವಸ್ಥೆಯಲ್ಲಿ ಮಲ್ಟಿ ಸಿಸ್ಟಮ್ ಆಪರೇಟರ್ ಕಾರ್ಯಾಚರಣೆಯನ್ನು 2014ರ ಸೆಪ್ಟೆಂಬರ್ 3ರಂದು ಗೃಹ ಸಚಿವಾಲಯವು ಅನುಮತಿ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಅವರು ಅನುಮತಿ ವಾಪಸಾತಿಗೆ ಭದ್ರತಾ ಕಾರಣಗಳನ್ನು ನೀಡಿ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.