ADVERTISEMENT

ಕರ್ನಾಟಕ ಭವನದ ಎಲ್ಲ ವಾಹನಗಳಿಗೆ ಜಿಪಿಎಸ್‌

ಜನಪ್ರತಿನಿಧಿಗಳಿಂದ ಸರ್ಕಾರಿ ವಾಹನ ದುರ್ಬಳಕೆ ತಡೆಗೆ ತೀವ್ರ ನಿಗಾ ಇರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 5:55 IST
Last Updated 23 ಡಿಸೆಂಬರ್ 2018, 5:55 IST
   

ನವದೆಹಲಿ: ರಾಷ್ಟ್ರ ರಾಜಧಾನಿಗೆ ಬರುವ ರಾಜ್ಯದ ಜನಪ್ರತಿನಿಧಿಗಳು ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ, ಇಲ್ಲಿನ ಕರ್ನಾಟಕ ಭವನದಲ್ಲಿರುವ ರಾಜ್ಯ ಸರ್ಕಾರದ ಎಲ್ಲ ವಾಹನಗಳಿಗೆ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ) ಸಾಧನ ಅಳವಡಿಸಲಾಗಿದೆ.

ಶಾಸಕರು, ಸಚಿವರು, ಸಂಸದರು ಮತ್ತು ಅಧಿಕಾರಿಗಳು ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬಂದಿರುವ ಕಾರಣ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಎಲ್ಲ ಕಾರ್‌ಗಳಿಗೆ ಜಿಪಿಎಸ್‌ ಅಳವಡಿಸುವಂತೆ ಆದೇಶಿಸಿದ್ದಾರೆ.

ಕಳೆದ ವಾರವಷ್ಟೇ ಪ್ರತಿ ವಾಹನಕ್ಕೂ ಜಿಪಿಎಸ್‌ ಸಾಧನ ಅಳವಡಿಸಲಾಗಿದ್ದು, ಸರ್ಕಾರಿ ವಾಹನವನ್ನು ಯಾವಾಗ, ಎಲ್ಲಿಗೆ ಕೊಂಡೊಯ್ಯಲಾಗಿದೆ, ಯಾವಾಗ ಮರಳಿ ಬಂದಿದೆ ಎಂಬ ಮಾಹಿತಿ ಇದರಿಂದ ಸುಲಭಕ್ಕೆ ದೊರೆಯಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಹಿರಿಯ ಅಧಿಕಾರಿಗಳು, ಸಚಿವರು, ಸಂಸತ್‌ ಸದಸ್ಯರು ಕಾರ್ಯನಿಮಿತ್ತ ಇಲ್ಲಿಗೆ ಭೇಟಿ ನೀಡಿದಾಗ ವಿಮಾನ ನಿಲ್ದಾಣದಿಂದಲೇ ಸರ್ಕಾರಿ ವಾಹನಗಳಲ್ಲಿ ಕರೆತರುವ ಹಾಗೂ ಬಿಟ್ಟು ಬರುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.

ಸಂಸದರಿಗೆ ಅಧಿಕಾರದ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ ಸಂಸತ್‌ ಭವನಕ್ಕೆ ಅಥವಾ ಅವರ ನಿವಾಸಕ್ಕೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಮತ್ತು ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸದ ನಿಮಿತ್ತ ಬಂದಿದ್ದರೆ, ಅವರಿಗೂ ಉಚಿತ ಸಾರಿಗೆ ಸೌಲಭ್ಯ ಇದೆ. ಶಾಸಕರಿಗೆ ಪ್ರತಿ ಕಿಲೊ ಮೀಟರ್‌ಗೆ ₹ 10 ಬಾಡಿಗೆಯಂತೆ ಸಾರಿಗೆ ಸೌಲಭ್ಯ ಒದಗಿಸಲಾಗುತ್ತಿದೆ.

ಅಧಿವೇಶನ ಹಾಗೂ ಸಭೆಗಳಿಗೆ ಹಾಜರಾಗುವ ಸಂಸದರಿಗೆ ನಿತ್ಯವೂ ಸಂಸತ್‌ ಭವನಕ್ಕೆ ಬಂದು ಹೋಗಲು ಕೇಂದ್ರ ಸರ್ಕಾರದಿಂದ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ, ಬಹುತೇಕ ಸಂಸದರು ಅದನ್ನು ಬಳಸದೆ, ರಾಜ್ಯ ಸರ್ಕಾರದ ವಾಹನಗಳನ್ನೇ ಬಳಸುತ್ತಿರುವುದು ಕಂಡುಬಂದಿದೆ.

ತಮಗೆ ಮಾತ್ರವಲ್ಲದೆ, ದೆಹಲಿಯಲ್ಲಿನ ಹಾಗೂ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳ ದರ್ಶನಕ್ಕೆ ಪ್ರವಾಸಕ್ಕೆ ಬರುವ ತಮ್ಮ ಕುಟುಂಬ ಸದಸ್ಯರಿಗೂ ರಾಜ್ಯ ಸರ್ಕಾರದ ವಾಹನಗಳಿಗೆ ಬೇಡಿಕೆ ಇರಿಸುವುದು ಸರ್ವೇ ಸಾಮಾನ್ಯವಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಭವನದ ಸುಪರ್ದಿಯಲ್ಲಿ 35 ಸರ್ಕಾರಿ ಕಾರ್‌ಗಳಿದ್ದು, ಅಧಿವೇಶನ, ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರ ದಂಡು ಭೇಟಿ ನೀಡಿದ ಸಂದರ್ಭದಲ್ಲಿ ಬಾಡಿಗೆಗೂ ಕೆಲವು ವಾಹನಗಳನ್ನು ಪಡೆಯುವುದು ವಾಡಿಕೆ. ಆದರೆ, ಕುಟುಂಬ ಸಮೇತ ಪ್ರವಾಸಕ್ಕೆ ಬರುವ ಸಚಿವರು, ಸಂಸದರು ಉಚಿತವಾಗಿ ದೊರೆಯುವ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಅನೇಕ ವರ್ಷಗಳಿಂದ ಕೇಳಿ ಬರುತ್ತಲೇ ಇದ್ದವು.

ಹೊಸದಾಗಿ ಆಯ್ಕೆಯಾಗಿರುವ ಸಂಸದರೊಬ್ಬರು ಇತ್ತೀಚೆಗಷ್ಟೇ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭ, ತಮಗೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗಾಗಿ ನಾಲ್ಕು ಕಾರ್‌ಗಳನ್ನು ಒದಗಿಸುವಂತೆ ಭವನದ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಸಂಗತಿ ಮುಖ್ಯಮಂತ್ರಿ ಕಚೇರಿಯನ್ನೂ ತಲುಪಿದ್ದು, ಸರ್ಕಾರಿ ವಾಹನಗಳ ಸಂಚಾರದ ಮೇಲೆ ತೀವ್ರ ನಿಗಾ ಇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಸಂಸದರಿಗೆ ಕರ್ನಾಟಕ ಸರ್ಕಾರ ಮಾತ್ರ ದೆಹಲಿಯಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದೆ. ಮಿಕ್ಕ ಯಾವುದೇ ರಾಜ್ಯ ಸರ್ಕಾರಗಳೂ ಈ ಸೌಲಭ್ಯ ನೀಡುತ್ತಿಲ್ಲ. ಇದೇ ರೀತಿ ದುರ್ಬಳಕೆಯ ಪ್ರಕರಣಗಳು ಮುಂದುವರಿದಲ್ಲಿ ಸಂಸದರಿಂದಲೂ ಬಾಡಿಗೆ ಆಕರಿಸಬೇಕು ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.