ADVERTISEMENT

ಲಸಿಕೆ ವ್ಯವಸ್ಥೆ ಮಾಡದೇ ‘ಟೀಕಾ ಉತ್ಸವ‘ ಆಚರಿಸಿದ ಸರ್ಕಾರ: ಪ್ರಿಯಾಂಕಾ ವ್ಯಂಗ್ಯ

ಪಿಟಿಐ
Published 12 ಮೇ 2021, 9:40 IST
Last Updated 12 ಮೇ 2021, 9:40 IST
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ   

ನವದೆಹಲಿ: ಕೇಂದ್ರ ಸರ್ಕಾರವು ಕೋವಿಡ್‌–19ರ ವಿರುದ್ಧ ಸಮರ್ಪಕವಾಗಿ ಲಸಿಕೆಗಳನ್ನು ವ್ಯವಸ್ಥೆ ಮಾಡಿಕೊಳ್ಳದೇ ಲಸಿಕಾ ಅಭಿಯಾನ (ಟೀಕಾ ಉತ್ಸವ) ಆಚರಿಸಿತು ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ವ್ಯಂಗ್ಯವಾಡಿದ್ದಾರೆ.

ಕೊರೊನಾ ವಿರುದ್ಧ ಗರಿಷ್ಠ ಸಂಖ್ಯೆಯ ಅರ್ಹ ಜನರಿಗೆ ಲಸಿಕೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಏಪ್ರಿಲ್‌ 11 ರಿಂದ 14ರವರೆಗೆ ಲಸಿಕೆಅಭಿಯಾನ ಹಮ್ಮಿಕೊಂಡಿತ್ತು. ಭಾರತವು ಲಸಿಕೆ ಉತ್ಪಾದಿಸುವ ಅತಿ ದೊಡ್ಡ ದೇಶ ಎಂದು ಸರ್ಕಾರ ಹೇಳಿತ್ತು. ಆದರೆ ಲಸಿಕಾ ಅಭಿಯಾನಕ್ಕೆ ಪೂರಕವಾಗಿ ಲಸಿಕೆಗಳನ್ನೇ ವ್ಯವಸ್ಥೆ ಮಾಡಿರಲಿಲ್ಲ. 30 ದಿನಗಳಲ್ಲಿ ದೇಶದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಶೇ 82ರಷ್ಟು ಕುಸಿತ ಕಂಡು ಬಂದಿದೆ ಎಂದು ಅವರು ದೂರಿದ್ದಾರೆ.

ಪ್ರಜೆಗಳಿಗೆ ಲಸಿಕೆ ನೀಡುವ ವಿಷಯದಲ್ಲಿ ಅಮೆರಿಕ, ಇಂಗ್ಲೆಂಡ್‌, ಟರ್ಕಿ ಮತ್ತು ಫ್ರಾನ್ಸ್‌ನಂತಹ ದೇಶಗಳ ಹಿಂದೆ ಭಾರತವಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಮೋದಿ ಅವರು ಲಸಿಕಾ ಕಾರ್ಖಾನೆಗಳಿಗೆ ಭೇಟಿ ನೀಡಿದ್ದರು. ಅಲ್ಲಿ ಫೋಟೊಗಳನ್ನು ತೆಗೆಸಿಕೊಂಡಿದ್ದರು. ಆದರೆ ಅವರ ಸರ್ಕಾರವು ಲಸಿಕೆಗಾಗಿ ಮೊದಲ ಆದೇಶವನ್ನು ಜನವರಿ 2021ರಲ್ಲಿ ಏಕೆ ನೀಡಿತು?’ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

‘ಅಮೆರಿಕ ಮತ್ತು ಇತರ ದೇಶಗಳು ಬಹಳ ಹಿಂದೆಯೇ ಭಾರತೀಯ ಲಸಿಕಾ ಕಂಪನಿಗಳೊಂದಿಗೆ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ಬೇಡಿಕೆ ಸಲ್ಲಿಸಿವೆ. ಇದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ’ ಎಂದು ಅವರು ಕೇಳಿದ್ದಾರೆ.

ಲಸಿಕಾ ಅಭಿಯಾನವು ಪ್ರತಿ ಮನೆಯನ್ನು ತಲುಪದ ಹೊರತು ಕೋವಿಡ್‌ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.