ADVERTISEMENT

ವ್ಯಕ್ತಿಯ ರಾಜಕೀಯ ಹಿನ್ನೆಲೆ ನೇಮಕಕ್ಕೆ ಅಡ್ಡಿಯಾಗಬಾರದು: ಕೇಂದ್ರ

ಲೋಕಸಭೆ: ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿ ಹುದ್ದೆಗೆ ನೇಮಕಾತಿ ಕುರಿತ ಚರ್ಚೆ

ಪಿಟಿಐ
Published 18 ಮಾರ್ಚ್ 2023, 12:40 IST
Last Updated 18 ಮಾರ್ಚ್ 2023, 12:40 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಯನ್ನಾಗಿ ಯೋಗ್ಯ ವ್ಯಕ್ತಿಯನ್ನು ನೇಮಕ ಮಾಡುವ ಸಂದರ್ಭದಲ್ಲಿ, ಆತನ ರಾಜಕೀಯ ಹಿನ್ನೆಲೆಯು ನೇಮಕಾತಿಗೆ ಅಡ್ಡಿಯಾಗಬಾರದು ಎಂಬುದಾಗಿ ಸುಪ್ರೀಂಕೋರ್ಟ್‌ ಇತ್ತೀಚಿನ ತನ್ನ ಆದೇಶದಲ್ಲಿ ತಿಳಿಸಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೇಳಿದೆ.

ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಈ ವಿವರ ನೀಡಿದ್ದಾರೆ.

‘ಹೈಕೋರ್ಟ್‌ಗಳು ಹಾಗೂ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವುದಕ್ಕೆ ಸಲ್ಲಿಕೆಯಾಗುವ ಪ್ರಸ್ತಾವಗಳಿಗೆ ಸಂಬಂಧಿಸಿ ಪರಿಶೀಲನೆ ನಡೆಸಲು ಸಾಮಾನ್ಯವಾಗಿ ರಿಸರ್ಚ್‌ ಅಂಡ್‌ ಅನಲಿಸಿಸ್ ವಿಂಗ್‌ (ಆರ್‌ಎಡಬ್ಲ್ಯು)ನಿಂದ ವರದಿ ಪಡೆಯುವ ಸಂಪ್ರದಾಯ ಇಲ್ಲ. ರಾಷ್ಟ್ರದ ಭದ್ರತೆಯಂತಹ ವಿಷಯಗಳನ್ನು ಒಳಗೊಂಡ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವರದಿಗಳನ್ನು ಪಡೆಯಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕ ಮಾಡುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳ ಪ್ರಕಾರ, ಹೈಕೋರ್ಟ್‌ ಕೊಲಿಜಿಯಮ್‌ಗಳು ಶಿಫಾರಸು ಮಾಡುವ ವ್ಯಕ್ತಿಗಳ ಕುರಿತು ಲಭ್ಯವಿರುವ ವರದಿಗಳನ್ನು ಪರಿಶೀಲಿಸಲಾಗುತ್ತದೆ. ಇಂಟೆಲಿಜೆನ್ಸ್‌ ಬ್ಯುರೊದಿಂದ ಪಡೆದ ಮಾಹಿತಿಯೂ ಸೇರಿದಂತೆ ಎಲ್ಲ ವಿವರಗಳನ್ನು ಪರಿಶೀಲನೆಗಾಗಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುತ್ತದೆ ಎಂದು ಸಚಿವ ರಿಜಿಜು ವಿವರಿಸಿದ್ದಾರೆ.

ಅಡ್ವೊಕೇಟ್‌ ಒಬ್ಬರ ಹೆಸರನ್ನು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಆ ಅಡ್ವೊಕೇಟ್‌ ಕುರಿತು ಆರ್‌ಎಡಬ್ಲ್ಯು ವರದಿಯಲ್ಲಿನ ಕೆಲ ಅಂಶಗಳನ್ನು ಸುಪ್ರೀಂಕೋರ್ಟ್‌ ಕೊಲಿಜಿಯಂ ಬಹಿರಂಗಪಡಿಸಿದ್ದಕ್ಕೆ ಸಂಬಂಧಿಸಿದ ಪ್ರಶ್ನೆಗೆ, ‘ಆ ವರದಿಯಲ್ಲಿ, ಶಿಫಾರಸು ಮಾಡಲಾಗಿದ್ದ ವ್ಯಕ್ತಿಯ ಲೈಂಗಿಕತೆ ಕುರಿತು ಪ್ರಸ್ತಾಪಿಸಲಾಗಿತ್ತು’ ಎಂದಷ್ಟೆ ಚುಟುಕಾಗಿ ಉತ್ತರಿಸಿದ ಸಚಿವ ರಿಜಿಜು, ಶಿಫಾರಸು ಮಾಡಲಾಗಿದ್ದ ವ್ಯಕ್ತಿಯ ಹೆಸರನ್ನು ಹೇಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.