ADVERTISEMENT

ಆರ್ಥಿಕ ಹಿಂಜರಿತ| ಪ್ರಧಾನಿಯ ದಿವ್ಯ ಮೌನ ಪ್ರಶ್ನಿಸಿದ ಚಿದಂಬರಂ

ಸರ್ಕಾರದ ಗ್ರಹಿಕೆಗೆ ನಿಲುಕದ ಆರ್ಥಿಕ ಹಿಂಜರಿತ: ಕಾಂಗ್ರೆಸ್ ಮುಖಂಡ ಟೀಕಾಪ್ರಹಾರ

ಪಿಟಿಐ
Published 5 ಡಿಸೆಂಬರ್ 2019, 19:31 IST
Last Updated 5 ಡಿಸೆಂಬರ್ 2019, 19:31 IST
ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಪುತ್ರ ಕಾರ್ತಿ ಹಾಗೂ ಸಂಸದ ಶಶಿ ತರೂರ್ ಜತೆ ಸಂಸತ್ ಭವನದ ಆವರಣದಲ್ಲಿ ಗುರುವಾರ ಕಾಣಿಸಿಕೊಂಡರು–ಪಿಟಿಐ ಚಿತ್ರ
ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಪುತ್ರ ಕಾರ್ತಿ ಹಾಗೂ ಸಂಸದ ಶಶಿ ತರೂರ್ ಜತೆ ಸಂಸತ್ ಭವನದ ಆವರಣದಲ್ಲಿ ಗುರುವಾರ ಕಾಣಿಸಿಕೊಂಡರು–ಪಿಟಿಐ ಚಿತ್ರ   

ನವದೆಹಲಿ: ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು 105 ದಿನಗಳ ಜೈಲುವಾಸ ಮುಗಿಸಿ ಜಾಮೀನಿನ ಮೇಲೆ ಬಿಡುಗಡೆಯಾದ ಮರುದಿನವೇ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ಆರ್ಥಿಕ ಹಿಂಜರಿತವನ್ನು ಟೀಕಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದಿವ್ಯಮೌನವನ್ನು ಪ್ರಶ್ನಿಸಿದ್ದಾರೆ. ಈ ಮೌನವು ಅವರ ಸಂಪುಟ ಸಹೋದ್ಯೋಗಿಗಳು ದುಡುಕಿನ ಹೇಳಿಕೆ ನೀಡುವಂತೆ ಮಾಡುತ್ತಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಥಿಕ ವರ್ಷ ಆರಂಭವಾಗಿ 7 ತಿಂಗಳು ಕಳೆದರೂ ಸಹ,ಆರ್ಥಿಕ ಸ್ಥಿತಿ ಸಹಜತೆಗೆ ಬರುತ್ತದೆ ಎಂದೇ ಸರ್ಕಾರ ಭಾವಿಸಿದೆ. ಆದರೆ ಅದು ಹಾಗಲ್ಲ. ಆರ್ಥಿಕ ಹಿಂಜರಿತವನ್ನು ಸರಿಯಾಗಿ ಗ್ರಹಿಸುವಲ್ಲಿ ಸರ್ಕಾರ ಎಡವಿದ್ದು, ದೇಶವನ್ನು ಸಂಕಷ್ಟಕ್ಕೆ ದೂಡಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

ಅರ್ಥವ್ಯವಸ್ಥೆ ಹದಗೆಟ್ಟಿರುವುದಕ್ಕೆ ಕೆಲ ಕಾರಣಗಳನ್ನೂ ನೀಡಿದ್ದಾರೆ. ‘ನೋಟು ರದ್ದತಿ, ಜಿಎಸ್‌ಟಿ ಜಾರಿ, ತೆರಿಗೆ ಭಯೋತ್ಪಾದನೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಧಾನಿ ಕಚೇರಿಯ ಏಕಸ್ವಾಮ್ಯದಂತಹ ತಪ್ಪುಗಳನ್ನು ಸರ್ಕಾರ ಮೊಂಡುತನದಿಂದ ಸಮರ್ಥಿಸಿಕೊಂಡಾಗ, ಹದಗೆಟ್ಟ ಆರ್ಥಿಕತೆಯ ಅಂದಾಜು ಸಿಗುವುದಾದರೂ ಹೇಗೆ’ ಎಂದವರು ಪ್ರಶ್ನಿಸಿದ್ದಾರೆ.

‘ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಸಾಧ್ಯವಿದೆ. ಆದರೆ ಇದನ್ನು ಮಾಡಲು ಈಗಿನ ಸರ್ಕಾರಕ್ಕೆ ಆಗದು. ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳಿಂದ ಚೇತರಿಕೆ ತರಲು ಸಾಧ್ಯವಿದೆ. ಆದರೆ ಒಳ್ಳೆಯ ದಿನಗಳಿಗಾಗಿ ನಾವು ಕಾಯಬೇಕಿದೆ’ ಎಂದು ಚಿದಂಬರಂ ವಿವರಿಸಿದ್ದಾರೆ.

ಸರ್ಕಾರ ಅನುಮತಿ ನೀಡಿದರೆ ಕಾಶ್ಮೀರಕ್ಕೆ ಭೇಟಿ ನೀಡಲು ಇಚ್ಛಿಸಿದ್ದೇನೆ ಎಂದ ಅವರು, ತಮ್ಮ ವಿರುದ್ಧದ ಪ್ರಕರಣದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

ಸ್ವಾಗತ ಕೋರಿದ ಸಂಸದರು

ಗುರುವಾರ ಸಂಸತ್ ಅಧಿವೇಶನಕ್ಕೆ ಹಾಜರಾದ ಚಿದಂಬರಂ ಅವರನ್ನು ವಿವಿಧ ಪಕ್ಷಗಳ ಸದಸ್ಯರು ಅಪ್ಪಿಕೊಂಡು, ಕೈಕುಲುಕಿ ಬರಮಾಡಿಕೊಂಡಿರು.ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲೂ ಅವರು ಭಾಗಿಯಾದರು.

ಪುತ್ರ ಕಾರ್ತಿ ಜತೆ ಸನದಕ್ಕೆ ಕಾಲಿಟ್ಟ ಅವರು, ‘ನನ್ನನ್ನು ಸುಮ್ಮನಾಗಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ’ ಎಂದರು. ಗುಲಾಂನಬಿ ಆಜಾದ್ ಅವರು ಆಲಂಗಿಸಿಕೊಂಡರು. ಆನಂದ್ ಶರ್ಮಾ, ಶಶಿ ತರೂರ್‌ ಅವರು ಹಸ್ತಲಾಘವ ಮಾಡಿದರು.

ತಮಗೆ ನಿಗದಿಪಡಿಸಿದ್ದ ಮೊದಲ ಸಾಲಿನ ಆಸದನಲ್ಲಿ ಕುಳಿತ ಅವರು ಮುಖಂಡರಾದ ಎ.ಕೆ. ಆ್ಯಂಟನಿ, ಜೈರಾಮ್ ರಮೇಶ್ ಜತೆ ಚರ್ಚಿಸಿದರು.

***

ಯುಪಿಎ ಸರ್ಕಾರವು 14 ಕೋಟಿ ಜನರನ್ನು ಬಡತದಿಂದ ಮೇಲೆತ್ತಿತ್ತು. ಈಗ ಸರ್ಕಾರ ಕೋಟ್ಯಂತರ ಜನರನ್ನು ಬಡತನಕ್ಕೆ ನೂಕಿದೆ
- ಪಿ.ಚಿದಂಬರಂ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.