ADVERTISEMENT

ನೀರಿಳಿದ ಮೇಲೆ ಕೆಸರಿನದ್ದೇ ಸಮಸ್ಯೆ

ನೆರೆಪೀಡಿತ ಪ್ರದೇಶಗಳಲ್ಲಿ ಶೇಖರವಾಗಿರುವ ಮಣ್ಣ–ಮರಳು ತೆರವಿನ ಸವಾಲು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 18:54 IST
Last Updated 23 ಆಗಸ್ಟ್ 2018, 18:54 IST
ಪರವೂರಿನಲ್ಲಿ ಕುಸಿದು ಬಿದ್ದಿರುವ ತನ್ನ ಮನೆಯ ಅವಶೇಷವನ್ನು ತೆರವು ಮಾಡುತ್ತಿರುವ ವ್ಯಕ್ತಿ – ರಾಯಿಟರ್ಸ್‌ ಚಿತ್ರ
ಪರವೂರಿನಲ್ಲಿ ಕುಸಿದು ಬಿದ್ದಿರುವ ತನ್ನ ಮನೆಯ ಅವಶೇಷವನ್ನು ತೆರವು ಮಾಡುತ್ತಿರುವ ವ್ಯಕ್ತಿ – ರಾಯಿಟರ್ಸ್‌ ಚಿತ್ರ   

ತಿರುವನಂತಪುರ :ಕೇರಳದಲ್ಲಿ ಮಹಾಮಳೆಯಿಂದ ಉಂಟಾಗಿದ್ದ ಪ್ರವಾಹ ಇಳಿದಿದ್ದರೂ, ಬಹುತೇಕ ಮನೆಗಳು ಕೆಸರಿನಿಂದ ಆವೃತವಾಗಿರುವುದರಿಂದ 13 ಲಕ್ಷಕ್ಕೂ ಹೆಚ್ಚು ಮಂದಿ ಇನ್ನೂ ಪರಿಹಾರ ಕೇಂದ್ರಗಳಲ್ಲೇ ಉಳಿದಿದ್ದಾರೆ.

ಪ್ರವಾಹಕ್ಕೆ ತುತ್ತಾಗಿದ್ದ 13 ಜಿಲ್ಲೆಗಳ ಬಹುತೇಕ ಕೃಷಿ ಭೂಮಿ ಮತ್ತು ರಸ್ತೆಗಳಲ್ಲಿ ಕೆಸರು ಶೇಖರವಾಗಿದೆ. ಲಕ್ಷಾಂತರ ಮನೆಗಳ ಒಳಗೂ ಕೆಸರು ಶೇಖರವಾಗಿದೆ. ಈ ಕೆಸರನ್ನು ಬೃಹತ್ ಯಂತ್ರಗಳಿಂದಲೇ ತೆರವು ಮಾಡಬೇಕಿದೆ. ಯಂತ್ರಗಳ ಕೊರತೆ ಇರುವುದರಿಂದ ಈ ಕಾರ್ಯಕ್ಕೆ ತೊಡಕಾಗಿದೆ.

‘ಕೆಲವು ಮನೆಗಳ ಒಳಗೆ ಆಳೆತ್ತರದಷ್ಟು ಕೆಸರು ಶೇಖರವಾಗಿದೆ. ಅವುಗಳ ಬಾಗಿಲನ್ನೇ ತೆರೆಯಲು ಸಾಧ್ಯವಾಗುತ್ತಿಲ್ಲ. ಇನ್ನೂ ಹಲವೆಡೆ ಕೆಸರನ್ನು ತೆರವು ಮಾಡಲಾಗಿದೆ. ಆದರೆ ಶೌಚಾಲಯಗಳಿಂದ ಕೊಳಚೆ ನೀರು ಹೊರಬರುತ್ತಿದೆ. ಅದು ಮನೆಗಳಲ್ಲಿ ತುಂಬಿಕೊಳ್ಳುತ್ತಿದ್ದು, ಬೀದಿಗಳಲ್ಲೂ ಹರಿಯುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸದೆ ಆ ಮನೆಗಳಲ್ಲಿ ವಾಸಿಸುವುದು ಅಸಾಧ್ಯ. ಹೀಗಾಗಿ ಮನೆಗೆ ಹಿಂತಿರುಗಿದ್ದವರೂ ಪರಿಹಾರ ಕೇಂದ್ರಗಳಿಗೆ ವಾಪಸ್ ಆಗುತ್ತಿದ್ದಾರೆ’ ಎಂದು ರಾಜ್ಯ ವಿಕೋಪ ನಿರ್ವಹಣಾ ಮಂಡಳಿ ಮಾಹಿತಿ ನೀಡಿದೆ.

ADVERTISEMENT

50,000 - ಸ್ವಯಂಸೇವಕರು ಕೆಸರು ತೆರವು ಕಾರ್ಯದಲ್ಲಿ ನೆರವಾಗುತ್ತಿದ್ದಾರೆ
50 - ಪಂಪ್‌ಗಳನ್ನು ನೀರು ಹೊರಹಾಕಲು ಬಳಸಲಾಗುತ್ತಿದೆ
3,520 - ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ
13.43 ಲಕ್ಷ - ಜನರು ಪರಿಹಾರ ಕೇಂದ್ರಗಳಲ್ಲೇ ಉಳಿದಿದ್ದಾರೆ

***

ಅಲ್ಫೋನ್ಸ್ ಕಣ್ಣಂತಾನಂ ವಿರುದ್ಧ ಕೇರಳದ ಮಂದಿ ಆಕ್ರೋಶ

ಪರಿಹಾರ ಕೇಂದ್ರದಲ್ಲಿ ಒಂದು ರಾತ್ರಿ ಕಳೆದು, ಅಲ್ಲಿ ತಾವು ಮಲಗಿದ್ದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ ವಿರುದ್ಧ ಕೇರಳದ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾವು ಮಲಗಿರುವ ಮೂರು ಚಿತ್ರಗಳನ್ನು ಕಣ್ಣಂತಾನಂ ಪ್ರಕಟಿಸಿದ್ದರು. ಅದರಲ್ಲಿ ಒಂದು ಚಿತ್ರದಲ್ಲಿ ಅವರು ಕಣ್ಣು ತೆರೆದುಕೊಂಡಿದ್ದು ಸೆರೆಯಾಗಿತ್ತು. ಈ ಚಿತ್ರಗಳನ್ನು ನೋಡಿ, ಟ್ವಿಟರ್‌ನಲ್ಲಿ #KannanthanamSleepChallenge ಎಂಬ ಸವಾಲನ್ನು ಆರಂಭಿಸಲಾಗಿದೆ. ಜನರು ತಾವು ಕಣ್ಣನ್ನು ಅರ್ಧ ಮುಚ್ಚಿಕೊಂಡು ಮಲಗಿರುವ ಚಿತ್ರಗಳನ್ನು ಟ್ವಿಟರ್‌ ನಲ್ಲಿ ಪ್ರಕಟಿಸಿ, ಕಣ್ಣಂತಾನಂರನ್ನು ಟ್ರೋಲ್ ಮಾಡುತ್ತಿದ್ದಾರೆ. ‘ನಾವಿಲ್ಲಿ ನೀರಿನಲ್ಲಿ ಮುಳುಗಿ ಪರದಾಡುತ್ತಿದ್ದೇವೆ. ನೀವು ಫೋಟೊ ತೆಗೆಸಿಕೊಂಡು ನಾಟಕವಾಡುತ್ತಿದ್ದೀರಾ? ಮೊದಲು ಎದ್ದು ಹೋಗಿ’ ಎಂದು ಟ್ವಿಟ್ಟಿಗರೊಬ್ಬರು ಸಿಟ್ಟು ವ್ಯಕ್ತಪಡಿಸಿದ್ದಾರೆ. ಹಲವರಿಗೆ ನಿದ್ದೆಯಲ್ಲಿ ನಡೆಯುವ ರೋಗವಿರುತ್ತದೆ. ಆದರೆ ಕಣ್ಣಂತಾನಂ ಅವರಿಗೆ ನಿದ್ದೆಯಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುವ ರೋಗವಿದೆ ಎಂದು ಮತ್ತೊಬ್ಬರು ಲೇವಡಿ ಮಾಡಿದ್ದಾರೆ.

ಟ್ರೋಲ್‌ ಹೆಚ್ಚಾಗುತ್ತಿದ್ದಂತೆ ಕಣ್ಣಂತಾನಂ ತಮ್ಮ ಟ್ವೀಟ್‌ ಅನ್ನು ಅಳಿಸಿಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.