ADVERTISEMENT

ಮೋದಿಗೆ ಹೆಡ್‌ಲೈನ್ ಬಗ್ಗೆಯೇ ಆಸಕ್ತಿ ಡೆಡ್‌ಲೈನ್‌ ಬಗ್ಗೆ ಅಲ್ಲ: ಕಾಂಗ್ರೆಸ್‌ ಗೇಲಿ

ಪಿಟಿಐ
Published 8 ಜೂನ್ 2021, 13:51 IST
Last Updated 8 ಜೂನ್ 2021, 13:51 IST
ಜೈರಾಂ ರಮೇಶ್, ಚಿತ್ರ ಪಿಟಿಐ
ಜೈರಾಂ ರಮೇಶ್, ಚಿತ್ರ ಪಿಟಿಐ   

ನವದೆಹಲಿ: ಕೋವಿಡ್‌ ಲಸಿಕೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಹೆಡ್‌ಲೈನ್‌ಗಳ ಬಗ್ಗೆ ಆಸಕ್ತಿಯೇ ಹೊರತು, ಡೆಡ್‌ಲೈನ್‌ ಬಗ್ಗೆ ಅಲ್ಲ ಎಂದು ಕಾಂಗ್ರೆಸ್ ಮಂಗಳವಾರ ಚಾಟಿ ಬೀಸಿದೆ.

ಈ ವರ್ಷಾಂತ್ಯದ ವೇಳೆಗೆ ಸರ್ವರಿಗೂ ಲಸಿಕೆ ನೀಡುವ ಕುರಿತ ಕಾರ್ಯಸೂಚಿ ಮತ್ತು ಲಸಿಕೆ ನೀತಿ ಕುರಿತಂತೆ ಸ್ಪಷ್ಟನೆ ನೀಡಲು ಸಂಸತ್‌ ಅಧಿವೇಶನ ಕರೆಯಬೇಕು ಎಂದು ಆಗ್ರಹಪಡಿಸಿದೆ.

ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಅವರು, ಎಲ್ಲ ಭಾರತೀಯರಿಗೂ ಉಚಿತವಾಗಿ ಲಸಿಕೆ ಸಿಗಬೇಕು. ಇದಕ್ಕಾಗಿ ಕೋವಿನ್‌ನಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯ ಮಾಡಬಾರದು. ಏಕೆಂದರೆ, ಡಿಜಿಟಲ್‌ ಸೌಲಭ್ಯವಿಲ್ಲದವರೂ ದೇಶದಲ್ಲಿ ಸಾಕಷ್ಟು ಮಂದಿ ಇದ್ದಾರೆ ಎಂದು ಪ್ರತಿಪಾದಿಸಿದರು.

ADVERTISEMENT

ರಾಜ್ಯಗಳಿಗೆ ಲಸಿಕೆಯನ್ನು ಹಂಚಿಕೆ ಮಾಡುವಾಗ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಅಲ್ಲದೆ, ಲಸಿಕೆ ನೀತಿ ಕುರಿತ ಚರ್ಚೆ ಹಾಗೂ ಇದಕ್ಕಾಗಿ ಮಾಡಬೇಕಾದ ವೆಚ್ಚಕ್ಕೆ ಅನುಮೋದನೆ ಪಡೆದುಕೊಳ್ಳಲು ಸಂಸತ್ತಿನ ಅಧಿವೇಶನವನ್ನು ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.

ಲಸಿಕೆ ವಿತರಣೆಯಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲದಂತೆ ಒಕ್ಕೂಟ ಆಡಳಿತದ ಸಹಕಾರ ತತ್ವವನ್ನು ಕೇಂದ್ರ ಸರ್ಕಾರ ಪಾಲಿಸಬೇಕು ಎಂದು ಒತ್ತಾಯಿಸಿದರು.

‘ಈ ಸರ್ಕಾರಕ್ಕೆ ಹೆಡ್‌ಲೈನ್‌ ಮೇಲೇ ಆಸಕ್ತಿ, ಡೆಡ್‌ಲೈನ್‌ ಮೇಲೆ ಅಲ್ಲ’ ಎಂದು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಟೀಕಿಸಿದ ಅವರು, ಸರ್ವರಿಗೂ ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಲಸಿಕೆಯನ್ನು ನೀಡುವುದರ ಕುರಿತು ರೂಪಿಸಿರುವ ಕಾರ್ಯಸೂಚಿ, ನೀತಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ವಿರುದ್ಧ ನೇರ ಹರಿಹಾಯ್ದ ಅವರು, ಪ್ರಧಾನಮಂತ್ರಿಯವರು ನಿದ್ರೆಯಲ್ಲಿದ್ದರು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದ ಬಳಿಕ ಈಗ ಕುಂಭಕರ್ಣನ ನಿದ್ರೆಯಿಂದ ಎದ್ದಿದ್ದಾರೆ. ಈಗಿನದು ಒಬ್ಬ ವ್ಯಕ್ತಿಯ ಅಹಂ ಮತ್ತು ವೈಫಲ್ಯದಿಂದಾಗಿ ಮೂಡಿರುವ ಬಿಕ್ಕಟ್ಟು. ಇದರ ಪರಿಣಾಮವನ್ನು ದೇಶವೇ ಎದುರಿಸುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.