
ಪಣಜಿ: ದೇಶದ ವಿವಿಧೆಡೆ ಪ್ರಮುಖ ಖನಿಜ ನಿಕ್ಷೇಪಗಳ ಶೋಧನೆಗೆ ಸಂಬಂಧಿತ ಲೈಸೆನ್ಸ್‌ಗಳನ್ನು ಇದೇ ಮೊದಲ ಬಾರಿಗೆ ಹರಾಜು ಹಾಕುವ ಪ್ರಕ್ರಿಯೆಗೆ ಕೇಂದ್ರ ಗಣಿ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಗುರುವಾರ ಇಲ್ಲಿ ಚಾಲನೆ ನೀಡಿದರು.
ಇಲ್ಲಿಗೆ ಸಮೀಪದ ಡೋನಾ ಪೌಲಾದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಿದ ಸಚಿವರು, ‘ಪ್ರಮುಖ ಖನಿಜ ಸಂಪನ್ಮೂಲಗಳ ಶೋಧನೆ ಹಿನ್ನೆಲೆಯಲ್ಲಿ ಇದು ಪ್ರಮುಖ ಸುಧಾರಣಾ ಹೆಜ್ಜೆಯಾಗಿದೆ’ ಎಂದರು.
ಸತು, ವಜ್ರ, ತಾಮ್ರ, ಪ್ರಾಟಿನಂ ಸಮೂಹದ ಖನಿಜಗಳು ಸೇರಿ ವಿವಿಧ ಖನಿಜಗಳ ಪರಿಶೋಧನೆಗೆ ಸಂಬಂಧಿಸಿ ಲೈಸೆನ್ಸ್ ಇದರಲ್ಲಿ ಸೇರಿವೆ.
ಒಟ್ಟು 13 ಬ್ಲಾಕ್‌ಗಳಲ್ಲಿ ಶೋಧನೆಗೆ ಸಂಬಂಧಿಸಿದ ಲೈಸೆನ್ಸ್‌ಗಳ ಹರಾಜು ಹಾಕಲಾಗುತ್ತಿದೆ. ಖಾಸಗಿ ಕಂಪನಿಗಳು ಪ್ರತಿ ಲೈಸೆನ್ಸ್‌ನಡಿ 1 ಸಾವಿರ ಚದರ ಮೀಟರ್ ವ್ಯಾಪ್ತಿಯಲ್ಲಿ ಖನಿಜ ನಿಕ್ಷೇಪಗಳ ಶೋಧನೆ ನಡೆಸಬಹುದಾಗಿದೆ. ಈ ಹೊಸ ಪರಿಕ್ರಮವು ಪಾರದರ್ಶಕತೆ, ದಕ್ಷಣೆ, ನವೀನತೆಗೆ ಉತ್ತೇಜನ ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಕಳೆದ 10 ವರ್ಷಗಳಲ್ಲಿ ನಿಕ್ಷೇಪ ಶೋಧನೆ ಚಟುವಟಿಕೆ ಗಣನೀಯವಾಗಿ ಏರಿದೆ. ಖಾಸಗಿ ವಲಯವನ್ನೂ ಈ ಕಾರ್ಯದಲ್ಲಿ ಸೇರ್ಪಡೆ ಗೊಳಿಸುವಲ್ಲಿ ಲೈಸೆನ್ಸ್ ಹರಾಜು ಕಾರ್ಯ ಮಹತ್ವದ್ದಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.