ADVERTISEMENT

ನಿರಂತರ ವಿದ್ಯುತ್‌ ಪೂರೈಕೆ: ಹೊಸ ಯೋಜನೆ ಘೋಷಣೆ ಸಾಧ್ಯತೆ

ವಿದ್ಯುತ್‌ ವಿತರಣಾ ಕಂಪನಿಗಳ ಪುನಶ್ಚೇತನಕ್ಕೆ ಒತ್ತು

ಪಿಟಿಐ
Published 31 ಜನವರಿ 2021, 7:33 IST
Last Updated 31 ಜನವರಿ 2021, 7:33 IST
 ವಿದ್ಯುತ್‌ ಪೂರೈಕೆ-ಸಾಂದರ್ಭಿಕ ಚಿತ್ರ
ವಿದ್ಯುತ್‌ ಪೂರೈಕೆ-ಸಾಂದರ್ಭಿಕ ಚಿತ್ರ   

ನವದೆಹಲಿ: ದಿನದ 24 ಗಂಟೆಯೂ ವಿದ್ಯುತ್‌ ಪೂರೈಕೆ ಗುರಿಯನ್ನು ಸಾಧಿಸುವ ಸಲುವಾಗಿ ಹಾಗೂ ನಷ್ಟದಲ್ಲಿರುವ ವಿದ್ಯುತ್‌ ವಿತರಣಾ ಕಂಪನಿಗಳ (ಡಿಸ್‌ಕಾಂ) ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಹೊಸ ಯೋಜನೆ ಘೋಷಿಸುವ ಸಾಧ್ಯತೆ ಎಂದು ಮೂಲಗಳು ಹೇಳಿವೆ.

ಕೆಲವು ವಿದ್ಯುತ್‌ ವಿತರಣಾ ಕಂಪನಿಗಳು ನಷ್ಟದಲ್ಲಿದ್ದರೆ, ಇನ್ನೂ ಕೆಲವು ಕಂಪನಿಗಳು ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿವೆ. ಇವುಗಳ ಪುನಶ್ಚೇತನ ಅಗತ್ಯ. ಆ ಮೂಲಕ ನಿರಂತರ ವಿದ್ಯುತ್‌ ಪೂರೈಕೆಯನ್ನು ಸಾಧಿಸಲು ಈ ಬಾರಿಯ ಬಜೆಟ್‌ನಲ್ಲಿ ಪ್ಯಾಕೇಜ್‌ ಘೋಷಿಸುವ ಸಾಧ್ಯತೆ ಎಂದು ಇವೇ ಮೂಲಗಳು ಹೇಳಿವೆ.

ಸಾಲದ ಸುಳಿಗೆ ಸಿಲುಕಿರುವ ಕಂಪನಿಗಳ ಪುನಶ್ಚೇತನಕ್ಕಾಗಿ 2015ರ ನವೆಂಬರ್‌ನಲ್ಲಿ ‘ಉದಯ್‌’ (ಉಜ್ವಲ್‌ ಡಿಸ್‌ಕಾಂ ಅಶ್ಯುರನ್ಸ್‌ ಯೋಜನಾ) ಹೆಸರಿನ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು.

ADVERTISEMENT

ಸಾಲದಿಂದ ಮುಕ್ತವಾಗಿ, ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಕಂಪನಿಗಳಿಗೆ ಈ ಯೋಜನೆಯಡಿ ಅವಕಾಶ ನೀಡಲಾಗಿತ್ತು. ಇದಕ್ಕಾಗಿ, ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಬೇಕು. ಒಪ್ಪಂದವೇರ್ಪಟ್ಟ ಮೂರು ವರ್ಷಗಳ ಒಳಗಾಗಿ ಆರ್ಥಿಕವಾಗಿ ಸದೃಢವಾಗಬೇಕು ಎಂಬ ಷರತ್ತನ್ನು ಯೋಜನೆ ಒಳಗೊಂಡಿತ್ತು.

ಎರಡನೇ ಹಂತದ ‘ಉದಯ್‌’ ಯೋಜನೆಗೆ (ಉದಯ್‌ 2.0) ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಆರ್‌.ಕೆ.ಸಿಂಗ್‌ ಅವರು 2019ರ ಸೆಪ್ಟೆಂಬರ್‌ನಲ್ಲಿ ಹೇಳಿದ್ದರು. ಹೀಗಾಗಿ, ನಾಳೆ (ಫೆ.1) ಮಂಡನೆಯಾಗುವ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.