ADVERTISEMENT

ಶಬರಿಮಲೆ: ಮಹಿಳೆಯರಿಗೆ ಪ್ರವೇಶ ಅನುಮಾನ

ನಿಲುವು ಬದಲಿಸಿದ ಕೇರಳ ಸರ್ಕಾರ: ಕೋರ್ಟ್‌ ಸ್ಪಷ್ಟ ಆದೇಶವಿದ್ದರಷ್ಟೇ ಅವಕಾಶ

ಏಜೆನ್ಸೀಸ್
Published 15 ನವೆಂಬರ್ 2019, 22:00 IST
Last Updated 15 ನವೆಂಬರ್ 2019, 22:00 IST
   

ತಿರುವನಂತಪುರ: ಎರಡು ತಿಂಗಳ ಅವಧಿಯ ಶಬರಿಮಲೆ ತೀರ್ಥಯಾತ್ರೆ ಋತು ಶನಿವಾರದಿಂದ ಆರಂಭವಾಗಲಿದೆ. ಈ ಬಾರಿಯೂ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶ ಲಭಿಸುವುದು ಅನುಮಾನ ಎನಿಸಿದೆ.

‘ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ಕೆಲವು ಗೊಂದಲಗಳಿವೆ. ಸರ್ಕಾರವು ಕಾನೂನು ತಜ್ಞರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಲಿದೆ. ದೇವಸ್ಥಾನದೊಳಗೆ ಪ್ರವೇಶಿಸಲೇಬೇಕು ಎನ್ನುವ ಮಹಿಳೆಯರು ನ್ಯಾಯಾಲಯದಿಂದ ಆದೇಶ ಪಡೆದುಕೊಳ್ಳಬೇಕು’ ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಶುಕ್ರವಾರ ಹೇಳಿದ್ದಾರೆ.

ಕಳೆದ ವರ್ಷ ದೇವಸ್ಥಾನವನ್ನು ಪ್ರವೇಶಿಸಲು ಬಂದಿದ್ದ ಮಹಿಳೆಯರಿಗೆ ಸರ್ಕಾರವೇ ಪೊಲೀಸ್‌ ಭದ್ರತೆಯನ್ನು ನೀಡಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಬಾರಿ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿರುವ ಸರ್ಕಾರ, ‘ದೇವಸ್ಥಾನದೊಳಗೆ ಪ್ರವೇಶಿಲು ಬರುವ ಮಹಿಳಾ ಚಳವಳಿಗಾರರಿಗೆ ಪೊಲೀಸ್‌ ರಕ್ಷಣೆ ಒದಗಿಸಲಾಗದು. ತಾವು ದೇವಸ್ಥಾನದೊಳಗೆ ಪ್ರವೇಶಿಸುತ್ತಿದ್ದೇವೆ ಎಂದು ಘೋಷಿಸಲು ಕೆಲವರು ಮಾಧ್ಯಮಗೋಷ್ಠಿ ಆಯೋಜಿಸುತ್ತಿದ್ದಾರೆ. ಇದರ ಹಿಂದೆ ಇರುವುದು ಪ್ರಚಾರ ಪಡೆಯುವ ಉದ್ದೇಶ ಮಾತ್ರ. ಇಂಥವರಿಗೆ ಬೆಂಬಲ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಶನಿವಾರ ಆರಂಭವಾಗುವ ತೀರ್ಥಯಾತ್ರೆಯ ಅವಧಿಯು ಜ. 20ಕ್ಕೆ ಕೊನೆಗೊಳ್ಳಲಿದೆ. ಹಾದಿಯುದ್ದಕ್ಕೂ ಬಿಗಿ ಭದ್ರತೆ ಮಾಡಲಾಗಿದೆ.

ಭಿನ್ನಮತದ ತೀರ್ಪು ಓದಿ: ನರಿಮನ್‌
ನವದೆಹಲಿ (ಪಿಟಿಐ): ‘ಶಬರಿಮಲೆ ವಿಚಾರದಲ್ಲಿ ನಿನ್ನೆ (ಗುರುವಾರ) ಪ್ರಕಟಿಸಿದ ಭಿನ್ನಮತದ ತೀರ್ಪನ್ನು ನಿಮ್ಮ ಸರ್ಕಾರ ಓದಿದೆಯೇ? ಅದನ್ನು ಓದಲು ನಿಮ್ಮ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಹೇಳಿ...’

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್‌ ಅವರು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತ ಅವರಿಗೆ ಶುಕ್ರವಾರ ಈ ಸೂಚನೆ ನೀಡಿದರು. ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರವಾಗಿ ನೀಡಿದ್ದ ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ಒಪ್ಪಿಸುವ ತೀರ್ಪಿಗೆ ನರಿಮನ್‌ ಭಿನ್ನಮತದ ತೀರ್ಪನ್ನು ನೀಡಿದ್ದರು.

‘ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ಕೆಲವು ಗೊಂದಲಗಳಿವೆ’ ಎಂದು ಸಚಿವ ಸುರೇಂದ್ರನ್‌ ಅವರು ಶುಕ್ರವಾರ ಹೇಳಿದ್ದಕ್ಕೆ ಉತ್ತರವಾಗಿ ನ್ಯಾಯಮೂರ್ತಿ ಈ ಸಲಹೆ ನೀಡಿದ್ದಾರೆ ಎಂದು ಅರ್ಥೈಸಲಾಗಿದೆ.

‘ನ್ಯಾಯಾಲಯದ ತೀರ್ಪನ್ನು ಯಾವುದೇ ಬದಲಾವಣೆಗಳಿಲ್ಲದೆ ಅನುಷ್ಠಾನಗೊಳಿಸುವುದು ಜಾರಿ ಸಂಸ್ಥೆಗಳ ಸಂವಿಧಾನಬದ್ಧ ಕರ್ತವ್ಯ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನೀಡಿರುವ ತೀರ್ಪುಗಳ ಅನುಷ್ಠಾನಕ್ಕೆ ಜಾರಿ ಸಂಸ್ಥೆಗಳು ಬದ್ಧರಾಗಿರಬೇಕಾದ್ದು ಅನಿವಾರ್ಯ. ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕೇ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ಅಧಿಕಾರಿಗಳಿಗೆ ನೀಡುವುದಾದರೆ, ಕಾನೂನಿಗೆ ಬೆಲೆ ಇರುವುದಿಲ್ಲ. ನ್ಯಾಯಾಲಯದ ತೀರ್ಪು ಅಧಿಕಾರಿಗಳಿಗೆ ನೀಡಿದ ಆಯ್ಕೆ ಆಗಿರುವುದಿಲ್ಲ. ತೀರ್ಪನ್ನು ಆಯ್ಕೆ ಎಂದು ಭಾವಿಸಿದರೆ, ನ್ಯಾಯಾಲಯದ ಅಧಿಕಾರವನ್ನೇ ದುರ್ಬಲಗೊಳಿಸಿದಂತಾಗುತ್ತದೆ’ ಎಂದು ಭಿನ್ನಮತದ ತೀರ್ಪಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.