ADVERTISEMENT

ನಾಗಾಲ್ಯಾಂಡ್ ದೇಶದ ಅವಿಭಾಜ್ಯ ಅಂಗ: ರಾಜ್ಯಪಾಲ ಜಗದೀಶ್ ಮುಖಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 13:29 IST
Last Updated 14 ಆಗಸ್ಟ್ 2022, 13:29 IST

ಗುವಾಹಟಿ: ನಾಗಾಲ್ಯಾಂಡ್ ಯಾವಾಗಲೂ ದೇಶದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ ಎಂದುರಾಜ್ಯಪಾಲ ಜಗದೀಶ್ ಮುಖಿ ಅವರು ಎಂಎಸ್‌ಸಿಎನ್‌ (ಐಎಂ) ಬಂಡುಕೋರರ ಸಂಘಟನೆನೀಡಿದ್ದ ಹೇಳಿಕೆಗೆ ಭಾನುವಾರ ತಿರುಗೇಟು ಕೊಟ್ಟಿದ್ದಾರೆ.

ನಾಗಾ ಜನರು ಭಾರತೀಯರೂ ಅಲ್ಲ, ಬರ್ಮಾದವರೂ (ಮ್ಯಾನ್ಮಾರ್‌) ಅಲ್ಲ ಎಂದು ಬಂಡುಕೋರರು ಹೇಳಿಕೊಂಡಿದ್ದರು.

ದೇಶದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ರಾಜ್ಯದ ಜನತೆ ಉದ್ದೇಶಿಸಿ ಮಾತನಾಡಿದ ಅವರು, ‌‘ನನ್ನ ಪ್ರೀತಿಯ ನಾಗಾ ಸಹೋದರ ಮತ್ತು ಸಹೋದರಿಯರೇ, ನಾಗಾಲ್ಯಾಂಡ್ ದೇಶದ ಅವಿಭಾಜ್ಯ ಅಂಗ. ನಮ್ಮ ಅನನ್ಯ ಸಾಂಸ್ಕೃತಿಕ ಹೆಗ್ಗುರುತನ್ನು ಕಾಪಾಡಿಕೊಳ್ಳಬೇಕು. ವಸಾಹತುಶಾಹಿ ಮನಸ್ಥಿತಿ ತೊರೆದು, ದೇಶದ ಹಿತಕ್ಕಾಗಿ ದೇಶವಾಸಿಗಳೊಂದಿಗೆ ಹೆಜ್ಜೆ ಹಾಕಿ. ಇದು ಭವಿಷ್ಯದಲ್ಲೂ ನಾಡಿನಲ್ಲಿ ಶಾಂತಿ, ಸಹಬಾಳ್ವೆ ನೆಲೆಸುವಂತೆ ಮಾಡುತ್ತದೆ’ ಎಂದು ಹೇಳಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಪ್ರತಿ ಮನೆಯ ಮೇಲೆ ತಿರಂಗಾ ಹಾರಿಸಿರುವ ನಾಗಾ ಜನರಿಗೆ ಅವರು ಅಭಿನಂದನೆಗಳನ್ನೂ ತಿಳಿಸಿದರು.

ಮುಖಿ ಅವರು ತಿರುಗೇಟು ನೀಡಿದ ಕೆಲವೇ ಗಂಟೆಗಳಲ್ಲಿ ಬಂಡುಕೋರರ ಮುಖ್ಯಸ್ಥ ಥಾಲೆಂಗ್ ಮುಯಿವಾ, ಸಂಘಟನೆಯ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ‘ನಾವು ರಕ್ತಗತವಾಗಿ, ಸಂಸ್ಕೃತಿ ಮತ್ತು ಇತಿಹಾಸದ ಮೂಲಕ ನಾಗಾಗಳು. ನಮ್ಮ ನಂಬಿಕೆ ಮತ್ತು ರಾಜಕೀಯ ಪರಿಕಲ್ಪನೆ ಒಂದೇ ಎಂದು ಪ್ರತಿಪಾದಿಸುತ್ತೇವೆ. ನಾವು ಭಾರತೀಯರೂ ಅಲ್ಲ,ಬರ್ಮಾದವರೂ ಅಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.