ADVERTISEMENT

ಭ್ರಷ್ಟಾಚಾರ ಆರೋಪ: ನ್ಯಾಯಮೂರ್ತಿ ಯಶವಂತ ವರ್ಮಾ ಪದಚ್ಯುತಿಗೆ ಮುಂದಾದ ಕೇಂದ್ರ

ವಾಗ್ದಂಡನೆ: ಸರ್ವಪಕ್ಷಗಳಿಂದ ಗೊತ್ತುವಳಿ ಮಂಡನೆಗೆ ಒಲವು

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 13:41 IST
Last Updated 4 ಜೂನ್ 2025, 13:41 IST
<div class="paragraphs"><p>ಯಶವಂತ ವರ್ಮಾ</p></div>

ಯಶವಂತ ವರ್ಮಾ

   

ನವದೆಹಲಿ: ಮನೆಯಲ್ಲಿ ನೋಟುಗಳ ಕಂತೆ ಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿರುವ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ವಾಗ್ದಂಡನೆಗೆ ಗುರಿಪಡಿಸಿ, ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಎಲ್ಲ ಪಕ್ಷಗಳೊಂದಿಗೆ ಸಮಾಲೋಚನೆ ಆರಂಭಿಸಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಿಗೊಳಿಸುವ ಸಂಬಂಧ ಎಲ್ಲ ಪಕ್ಷಗಳು ಒಟ್ಟಾಗಿ ವಾಗ್ದಂಡನೆ ಗೊತ್ತುವಳಿ ಮಂಡಿಸಬೇಕು ಎಂಬುದು ಸರ್ಕಾರದ ಬಯಕೆ. ಜುಲೈ 21ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿಯೇ ಈ ಕುರಿತ ಗೊತ್ತುವಳಿ ಮಂಡಿಸುವ ಸಂಬಂಧ ಎಲ್ಲ ಪಕ್ಷಗಳೊಂದಿಗೆ ಚರ್ಚೆ ಆರಂಭಿಸಿದ್ದೇನೆ’ ಎಂದರು.

ADVERTISEMENT

‘ನ್ಯಾಯಮೂರ್ತಿ ವರ್ಮಾ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಕುರಿತು ಪ್ರಮುಖ ರಾಜಕೀಯ ಪಕ್ಷಗಳಿಗೆ ಈಗಾಗಲೇ ತಿಳಿಸಲಾಗಿದೆ. ಸಣ್ಣ ಪಕ್ಷಗಳಿಗೂ ಈ ಬಗ್ಗೆ ವಿವರಿಸಿ, ಅವುಗಳನ್ನು ಕೂಡ ಈ ಪ್ರಕ್ರಿಯೆಯ ಭಾಗವಾಗುವಂತೆ ಮಾಡಲಾಗುವುದು’ ಎಂದು ಹೇಳಿದರು.

‘ಭ್ರಷ್ಟಾಚಾರ ವಿಚಾರವು ಯಾವುದೇ ಒಂದು ಪಕ್ಷದ ಕಾರ್ಯಸೂಚಿಯಲ್ಲ ಎಂಬುದು ಸರ್ಕಾರದ ಭಾವನೆ. ನ್ಯಾಯಾಂಗ ಅಥವಾ ಯಾವುದೇ ಕ್ಷೇತ್ರದವಿರಲಿ, ಭ್ರಷ್ಟಾಚಾರವೆಂಬ ಪಿಡುಗಿನ ವಿರುದ್ಧ ಹೋರಾಡಬೇಕು ಎಂಬುದು ಎಲ್ಲ ರಾಜಕೀಯ ಪಕ್ಷಗಳ ನಿಲುವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.