ADVERTISEMENT

12-14 ವರ್ಷದ ಮಕ್ಕಳಿಗೆ ಇಂದಿನಿಂದ ಲಸಿಕೆ: ಮಾರ್ಗಸೂಚಿ ಬಿಡುಗಡೆ

ಪಿಟಿಐ
Published 15 ಮಾರ್ಚ್ 2022, 21:33 IST
Last Updated 15 ಮಾರ್ಚ್ 2022, 21:33 IST
ಕೊರ್ಬೆವ್ಯಾಕ್ಸ್ ಲಸಿಕೆ
ಕೊರ್ಬೆವ್ಯಾಕ್ಸ್ ಲಸಿಕೆ   

ನವದೆಹಲಿ:12-14 ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ಕುರಿತಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಎಲ್ಲ ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ.

12ರಿಂದ 13 ವರ್ಷ ಹಾಗೂ 13ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ಈ ಲಸಿಕೆಯನ್ನು ಎರಡು ಡೋಸ್‌ಗಳನ್ನು ನೀಡಲು ಉದ್ದೇಶಿಸಿದ್ದು, ಇವುಗಳ ನಡುವೆ 28 ದಿನಗಳ ಅಂತರವಿರಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

2010 ಹಾಗೂ ಅದಕ್ಕೂ ಮುನ್ನ ಜನಿಸಿರುವವರು ಅಂದರೆ, 12 ವರ್ಷ ಪೂರ್ಣಗೊಂಡ ಮಕ್ಕಳು ‘ಕೋವಿನ್’ನಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ನೋಂದಣಿ ಆಧಾರದಲ್ಲಿ ಲಸಿಕೆ ನೀಡುವ ದಿನಾಂಕ ಹಾಗೂ ಸಮಯ ನಿಗದಿಯಾಗುತ್ತದೆ. ಲಸಿಕೆ ಪಡೆಯುವ ದಿನಾಂಕಕ್ಕೆ ಸರಿಯಾಗಿ 12 ವರ್ಷ ತುಂಬಿರುವುದು ಕಡ್ಡಾಯ. ಒಂದು ವೇಳೆ ಕೋವಿನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರೂ, ಮಗುವಿಗೆ 12 ವರ್ಷ ತುಂಬದಿದ್ದ ಪಕ್ಷದಲ್ಲಿ, ಲಸಿಕೆ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ADVERTISEMENT

ನೋಂದಣಿಗೆ ಹಲವು ವಿಧಾನಗಳನ್ನು ಸೂಚಿಸಲಾಗಿದೆ. ಕೋವಿನ್‌ನಲ್ಲಿ ಹೊಸ ಖಾತೆ ತೆರೆದು ನೋಂದಣಿ ಮಾಡಿಕೊಳ್ಳಬಹುದು. ಕುಟುಂಬ ಸದಸ್ಯರು ಈಗಾಗಲೇ ಕೋವಿನ್ ಖಾತೆ ಹೊಂದಿದ್ದರೆ, ಅದರ ಮೂಲಕವೂ ನೋಂದಣಿ ಮಾಡಿಕೊಳ್ಳಬದು. ಅಥವಾ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಳ್ಳಬಹುದು.

ಬೇರೆ ವಯೋಮಾನದ ಗುಂಪಿನ ಮಕ್ಕಳಿಗೂ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಗೊಂದಲ ತಡೆಯಲು, 12-14 ವರ್ಷ ವಯೋಮಾನದ ಮಕ್ಕಳಿಗೆ ಪ್ರತ್ಯೇಕ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.ಈ ಲಸಿಕೆಗಳು ಉಚಿತವಾಗಿವೆ.

9 ತಿಂಗಳ ಅಂತರ
60 ವರ್ಷ ವಯಸ್ಸಾದವರಿಗೆ ‘ಮುನ್ನೆಚ್ಚರಿಕೆ ಡೋಸ್‌’ನೀಡಲಾಗುತ್ತದೆ. ಇದು ಮೂರನೇ ಡೋಸ್‌ ಆಗಿದ್ದು, ಎರಡನೇ ಡೋಸ್‌ ಪಡೆದು 39 ವಾರ ಅಥವಾ 9 ತಿಂಗಳು ಕಳೆದಿರುವವರು ಮಾತ್ರ ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಬಹುದು. ಈ ಹಿಂದೆ ಪಡೆದಿದ್ದ ಕಂಪನಿಯ ಲಸಿಕೆಯನ್ನೇ ಮೂರನೇ ಡೋಸ್‌ ವೇಳೆ ಪಡೆಯಬೇಕು ಎಂದು ಮಾರ್ಗಸೂಚಿ ಉಲ್ಲೇಖಿಸಿದೆ.

76.58 ಲಕ್ಷ ಮಂದಿಗೆ 3ನೇ ಡೋಸ್
ಬೆಂಗಳೂರು: ರಾಜ್ಯದಲ್ಲಿ 60 ವರ್ಷಗಳು ಮೇಲ್ಪಟ್ಟ 76.58 ಲಕ್ಷ ಮಂದಿ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್ (3ನೇ ಡೋಸ್) ಪಡೆಯಲು ಅರ್ಹರಾಗಿದ್ದಾರೆ. ಕೋವಿನ್ ಪೋರ್ಟಲ್ ನೋಂದಣಿ ಪ್ರಕಾರ, ಎರಡನೇ ಡೋಸ್ ಲಸಿಕ ಪಡೆದು 9 ತಿಂಗಳು ಪೂರೈಸಿದ 60 ವರ್ಷಗಳು ಮೇಲ್ಪಟ್ಟ ಎಲ್ಲ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಲಸಿಕ ಪಡೆಯಬಹುದು. ಮುನ್ನೆಚ್ಚರಿಕೆ ಡೋಸ್ ಲಸಿಕೆಗೆ ಹೊಸದಾಗಿ ನೋಂದಣಿ ಮಾಡಲಾಗುವುದಿಲ್ಲ. ಮೊದಲೆರಡು ಡೋಸ್ ಪಡೆದ ಕಂಪನಿಯ ಲಸಿಕೆಯನ್ನೇ ಮೂರನೆ ಡೋಸ್‌ಗೂ ಪಡೆಯಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.