ADVERTISEMENT

ಆರ್ಥಿಕ ಪರಿಸ್ಥಿತಿ ಅವಲೋಕನ ಸಭೆ: ಇಂಧನ ದರ ಏರಿಕೆ ಚರ್ಚೆ ಇಲ್ಲ

ಆರ್ಥಿಕ ಪ್ರಗತಿ ಬಗ್ಗೆ ಪ್ರಧಾನಿ ಮೋದಿ ಸಂತೃಪ್ತಿ

ಪಿಟಿಐ
Published 15 ಸೆಪ್ಟೆಂಬರ್ 2018, 20:10 IST
Last Updated 15 ಸೆಪ್ಟೆಂಬರ್ 2018, 20:10 IST
ಹಣಕಾಸು ಸಚಿವ ಅರುಣ್ ಜೇಟ್ಲಿ
ಹಣಕಾಸು ಸಚಿವ ಅರುಣ್ ಜೇಟ್ಲಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಆರ್ಥಿಕ ಪರಿಸ್ಥಿತಿ ಅವಲೋಕನ ಸಭೆಯಲ್ಲಿ ತೈಲ ದರ ಏರಿಕೆಯ ವಿಷಯ ಚರ್ಚೆಗೆ ಬರಲಿಲ್ಲ.

ಆದರೆ, ಆರ್ಥಿಕ ಪ್ರಗತಿ, ಹಣದುಬ್ಬರ ಮತ್ತು ತೆರಿಗೆ ಸಂಗ್ರಹದ ಬಗ್ಗೆ ಪ್ರಧಾನಿ ಮೋದಿ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದುಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದರು.

ಎರಡು ದಿನಗಳ ಉನ್ನತ ಮಟ್ಟದ ಸಭೆಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ನಿಯಂತ್ರಣಕ್ಕೆ ಪರಿಹಾರ ಸಿಗುವ ನಿರೀಕ್ಷೆ ಇತ್ತು.

ADVERTISEMENT

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಇಂಧನ ದರ ಏರಿಕೆ ಬಗ್ಗೆ ಚರ್ಚಿಸಲು ಈ ಸಭೆ ಕರೆದಿರಲಿಲ್ಲ. ಆರ್ಥಿಕ ಸ್ಥಿತಿಗತಿ ಬಗ್ಗೆ ಮಾತ್ರ ಚರ್ಚಿಸಲಾಯಿತು ಎಂದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಬಜೆಟ್‌ ನಿರೀಕ್ಷೆಗಿಂತ ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ವಿಶ್ವಾಸವಿದೆ ಎಂದ ಜೇಟ್ಲಿ, ಬಂಡವಾಳ ವೆಚ್ಚ ತಗ್ಗಿಸದಿರಲು ಸರ್ಕಾರ ನಿರ್ಧರಿಸಿದೆ ಎಂದೂ ತಿಳಿಸಿದರು.

ಆರ್ಥಿಕ ಪುನಶ್ಚೇತನಕ್ಕೆ ಪಂಚಸೂತ್ರ: ಚಾಲ್ತಿ ಖಾತೆ ಕೊರತೆ ಹೆಚ್ಚಳವನ್ನು ನಿಯಂತ್ರಿಸಲು ಮತ್ತು ರೂಪಾಯಿ ಮೌಲ್ಯ ಕುಸಿತ ತಡೆಯುಲು ಪಂಚಸೂತ್ರಗಳನ್ನು ಪ್ರಕಟಿಸಿದೆ.

‘2018–19ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆ ಕೊರತೆ ಶೇ 2.4ಕ್ಕೆ ವೃದ್ಧಿಯಾಗಿದೆ. ಇದನ್ನು ನಿಯಂತ್ರಿಸಲು ಐದು ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎಂದು ಜೇಟ್ಲಿ ತಿಳಿಸಿದರು.

ಆಮದು ವೆಚ್ಚ ತಗ್ಗಿಸುವ ಉದ್ದೇಶದಿಂದ ಅಗತ್ಯವಲ್ಲದ ವಸ್ತುಗಳ ಆಮದಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಮಸಾಲಾ ಬಾಂಡ್‌ಗಳ ಮೇಲಿನ ಶೇ 5ರಷ್ಟು ತೆರಿಗೆ ಕೈಬಿಡು
ವುದು,ತಯಾರಿಕಾ ಕಂಪನಿಗಳಿಗೆ ಬಾಹ್ಯ ವಾಣಿಜ್ಯ ಸಾಲ ಪಡೆಯುವ ನಿಯಮ ಸರಳಗೊಳಿಸಲು ಸರ್ಕಾರ ಮುಂದಾಗಿದೆ. ರಫ್ತು ವಹಿವಾಟು ಹೆಚ್ಚಿಸುವುದು ಹಾಗೂ ವಿತ್ತೀಯ ಕೊರತೆ ಮಿತಿ ಮೀರದಂತೆ ನೋಡಿಕೊಳ್ಳಲು ಸಹ ಕ್ರಮ ಕೈಗೊಳ್ಳಲಿದೆ.

*****

ತೆರಿಗೆ ಸಂಗ್ರಹ ಮತ್ತು ಷೇರು ವಿಕ್ರಯ ನಿರೀಕ್ಷೆಗಿಂತ ಹೆಚ್ಚಿರಲಿದ್ದು, ವಿತ್ತೀಯ ಕೊರತೆಯನ್ನು ಶೇ 3.3ರಲ್ಲಿಯೇ ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ.

– ಅರುಣ್‌ ಜೇಟ್ಲಿ, ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.