ADVERTISEMENT

ಕ್ಷುಲ್ಲಕ ಕಾರಣಗಳಿಗೆ ಜೈಲು ಶಿಕ್ಷೆ ತಪ್ಪಿಸುವ ಮಸೂದೆ ಮಂಡನೆಗೆ ಕೇಂದ್ರ ಸಜ್ಜು

ಪಿಟಿಐ
Published 17 ಆಗಸ್ಟ್ 2025, 9:55 IST
Last Updated 17 ಆಗಸ್ಟ್ 2025, 9:55 IST
<div class="paragraphs"><p>ಲೋಕಸಭೆ ಅಧಿವೇಶನ</p></div>

ಲೋಕಸಭೆ ಅಧಿವೇಶನ

   

ಪ್ರಾತಿನಿಧಿಕ ಚಿತ್ರ

ನವದೆಹಲಿ: ಜೀವನ ನಿರ್ವಹಣೆ ಮತ್ತು ವ್ಯವಹಾರಗಳನ್ನು ಸುಗಮವಾಗಿ ನಡೆಯುವಂತೆ ಮಾಡಲು ಉದ್ದೇಶಿಸಿರುವ ಕೇಂದ್ರ ಸರ್ಕಾರ, ಸಣ್ಣ ಪ್ರಮಾಣದ ತಪ್ಪುಗಳಿಗೂ ಜೈಲು ಶಿಕ್ಷೆ ವಿಧಿಸುವಂತೆ ಮಾಡುವ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿದೆ.

ADVERTISEMENT

ಸಣ್ಣ ತಪ್ಪುಗಳಿಗೂ ಜೈಲು ಶಿಕ್ಷೆಯನ್ನು ಶಿಫಾರಸ್ಸು ಮಾಡುವ ಕೆಲವು ನಿಬಂಧನೆಗಳನ್ನು ಅಪರಾಧಗಳ ಪಟ್ಟಿಯಿಂದ ಹೊರಗಿಡುವ 'ಜನ ವಿಶ್ವಾಸ (ತಿದ್ದುಪಡಿ) ಮಸೂದೆ–2025' ಅನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್‌ ಗೋಯಲ್‌ ಅವರು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಿದ್ದಾರೆ.

ಕಲಾಪಕ್ಕೆ ಸಂಬಂಧಿಸಿದಂತೆ ಲೋಕಸಭೆ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, 'ಜೀವನ ಮತ್ತು ವ್ಯವಹಾರಗಳನ್ನು ಸುಗಮಗೊಳಿಸುವುದಕ್ಕಾಗಿ, ಆಡಳಿತದಲ್ಲಿ ವಿಶ್ವಾಸ ವೃದ್ಧಿಸುವ ಸಲುವಾಗಿ ಸಣ್ಣ ಪ್ರಮಾಣದ ತಪ್ಪುಗಳನ್ನು ಅಪರಾಧ ಮುಕ್ತಗೊಳಿಸಲು ಹಾಗೂ ತರ್ಕಬದ್ಧಗೊಳಿಸಲು ಕಾನೂನಿನಲ್ಲಿ ಕೆಲವು ಮಾರ್ಪಾಡು ಮಾಡಲು ಅವಕಾಶ ಕಲ್ಪಿಸುವ ಮಸೂದೆಯನ್ನು ಸಚಿವರು ಮಂಡಿಸಲಿದ್ದಾರೆ' ಎನ್ನಲಾಗಿದೆ.

ಸುಮಾರು 350ಕ್ಕೂ ಹೆಚ್ಚು ನಿಬಂಧನೆಗಳಿಗೆ ತಿದ್ದುಪಡಿ ಮಾಡುವುದನ್ನು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸುಧಾರಿಸುವುದು ಈ ಮಸೂದೆಯ ಉದ್ದೇಶ ಎನ್ನಲಾಗಿದೆ.

ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುವುದು ಮತ್ತು ಜನಸ್ನೇಹಿ ವಾತಾವರಣ ಸೃಷ್ಟಿಸುವುದು ಈ ಕ್ರಮದ ಉದ್ದೇಶ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2023ರ ಆರಂಭದಲ್ಲಿ ಜನ ವಿಶ್ವಾಸ್‌ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಅದು, 19 ಸಚಿವಾಲಯ, ಇಲಾಖೆಗಳಿಗೆ ಸಂಬಂಧಿಸಿದ 42 ಕಾಯ್ದೆಗಳಲ್ಲಿನ 183 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಿತ್ತು.

ಈ ಕಾಯ್ದೆಯ ಮೂಲಕ ಕೆಲವು ನಿಬಂಧನೆಗಳಿಗೆ ಜೈಲು ಶಿಕ್ಷೆ /ದಂಡವನ್ನು ರದ್ದು ಮಾಡಲಾಗಿದೆ. ಕೆಲವು ನಿಯಮಗಳಲ್ಲಿ ಜೈಲು ಶಿಕ್ಷೆಯನ್ನು ರದ್ದು ಮಾಡಿ, ದಂಡವನ್ನಷ್ಟೇ ಉಳಿಸಿಕೊಳ್ಳಲಾಗಿದೆ. ಹಾಗೆಯೇ, ಇನ್ನೂ ಕೆಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ದಂಡವಾಗಿ ಪರಿವರ್ತಿಸಲಾಗಿದೆ. 

79ನೇ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಕ್ಷುಲ್ಲಕ ಕಾರಣಗಳಿಗೂ ಜೈಲು ಶಿಕ್ಷೆ ವಿಧಿಸುವಂತಹ ಹಲವು ಕಾನೂನುಗಳು ನಮ್ಮಲ್ಲಿವೆ. ಅವುಗಳ ಕಡೆಗೆ ಇದುವರೆಗೆ ಯಾರೂ ಗಮನಹರಿಸಿರಲಿಲ್ಲ. ದೇಶದ ನಾಗರಿಕರನ್ನು ಜೈಲಿನಲ್ಲಿರಿಸುವ ಇಂತಹ ಅನಗತ್ಯ ಕಾನೂನುಗಳನ್ನು ರದ್ದು ಮಾಡುವ ಹೊಣೆ ಹೊತ್ತುಕೊಂಡಿದ್ದೇನೆ' ಎಂದು ಹೇಳಿದ್ದರು.

ಕೇಂದ್ರ ಸರ್ಕಾರವು ಸುಮಾರು 40,000ಕ್ಕೂ ಅಧಿಕ ಅನಗತ್ಯ ನಿಯಮಗಳನ್ನು ಈಗಾಗಲೇ ರದ್ದು ಮಾಡಿದೆ. ಹಾಗೆಯೇ, ಬಳಕೆಯಲ್ಲಿಲ್ಲದ ಸುಮಾರು, 1,500 ಕಾನೂನುಗಳನ್ನು ತೆಗೆದುಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.