ADVERTISEMENT

ಕೃಷಿ ಕಾಯ್ದೆ ಕುರಿತ ಸುಪ್ರೀಂ ಆದೇಶಕ್ಕೆ ಸ್ವಾಗತವಿದೆ: ಕೇಂದ್ರ ಕೃಷಿ ಸಚಿವ

ಏಜೆನ್ಸೀಸ್
Published 15 ಜನವರಿ 2021, 8:35 IST
Last Updated 15 ಜನವರಿ 2021, 8:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ರೈತರು ಮತ್ತು ಕೇಂದ್ರದ ನಡುವೆ ಉಲ್ಬಣಿಸಿರುವ ಬಿಕ್ಕಟ್ಟಿನ ಶಮನಕ್ಕೆ ನಾಲ್ವರು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ರಚಿಸಿದೆ. ಸುಪ್ರೀ ಕೋರ್ಟ್‌ನ ಈ ಆದೇಶವನ್ನು ಸರ್ಕಾರ ಸ್ವಾಗತಿಸುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶುಕ್ರವಾರ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, 'ರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆದೇಶವನ್ನು ಸರ್ಕಾರ ಸ್ವಾಗತಿಸುತ್ತದೆ. ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಮಿತಿಯ ಮುಂದೆ ನಮ್ಮ ಅಭಿಪ್ರಾಯಗಳನ್ನು ಇಡಲಿದ್ದೇವೆ. ಸಂವಾದದ ಮೂಲಕ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಲಿದ್ದೇವೆ' ಎಂದು ತಿಳಿಸಿದ್ದಾರೆ.

ಇದೇ ವೇಳೆ ಸುಪ್ರೀಂ ಕೋರ್ಟ್‌ನ ಸಮಿತಿ ರಚನೆ ನಿರ್ಧಾರವನ್ನು ರೈತರು ವಿರೋಧಿಸಿದ್ದಾರೆ. ನಾವು ಸಮಿತಿಯ ಮುಂದೆ ಹೋಗುವುದೂ ಇಲ್ಲ ಎಂದು ರೈತರು ಹೇಳಿದ್ದಾರೆ.

ADVERTISEMENT

ಮೂರೂ ಕಾಯ್ದೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್‌ ಅವರ ಪೀಠವು ನಡೆಸಿತ್ತು. ಬಿಕ್ಕಟ್ಟು ಪರಿಹಾರಕ್ಕೆ ನೇಮಿಸಿರುವ ಸಮಿತಿಯು ರೈತರ ಸಮಸ್ಯೆಗಳನ್ನು ಆಲಿಸಲಿದೆ ಎಂದು ಪೀಠವು ಹೇಳಿತ್ತು.

ರೈತರ ಪ್ರತಿಭಟನೆಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ ಸೋಮವಾರ ಅಸಮಾಧಾನ ವ್ಯಕ್ತಪಡಿಸಿತ್ತು. ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಎಂಟು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ನ.28ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಮೂರೂ ಕಾಯ್ದೆಗಳನ್ನು ‍ಹಿಂಪಡೆಯಬೇಕು ಎಂಬ ಬೇಡಿಕೆಯಿಂದ ಒಂದಿಂಚೂ ಹಿಂದೆ ಸರಿದಿಲ್ಲ.

ಸುಪ್ರೀಂ ಕೊರ್ಟ್‌ ನೇಮಿಸಿದ್ದ ಸಮಿತಿಯಲ್ಲಿ ಒಬ್ಬರಾಗಿದ್ದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮನ್ ಅವರು, ಸದಸ್ಯತ್ವ ಸ್ಥಾನದಿಂದ ಹಿಂದೆ ಸರಿದಿದ್ದರು. ಉಳಿದಂತೆ ಮಹಾರಾಷ್ಟ್ರದ ಶೆಟ್ಕಾರಿ ಸಂಘಟನಾ ಅಧ್ಯಕ್ಷ ಘನ್ವಾತ್, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಪ್ರಮೋದ್ ಕುಮಾರ್ ಜೋಶಿ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಅವರು ಸಮಿತಿಯ ಇತರ ಮೂವರು ಸದಸ್ಯರಾಗಿದ್ದಾರೆ.

ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಕೇಂದ್ರ ಸರ್ಕಾರದ ಮೂವರು ಸಚಿವರು ಶುಕ್ರವಾರ (ಇಂದು) ಮಧ್ಯಾಹ್ನ ಒಂಬತ್ತನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.