ADVERTISEMENT

ತಿದ್ದುಪಡಿಗೆ ಸಮ್ಮತಿ ಎಂದರೆ ಕಾನೂನಿನಲ್ಲಿ ಲೋಪ ಎಂದರ್ಥವಲ್ಲ: ಕೃಷಿ ಸಚಿವ ತೋಮರ್‌

ಪಿಟಿಐ
Published 5 ಫೆಬ್ರುವರಿ 2021, 11:09 IST
Last Updated 5 ಫೆಬ್ರುವರಿ 2021, 11:09 IST
ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರಸಿಂಗ್‌ ತೋಮರ್‌ ಶುಕ್ರವಾರ ಮಾತನಾಡಿದರು –ಪಿಟಿಐ ಚಿತ್ರ
ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರಸಿಂಗ್‌ ತೋಮರ್‌ ಶುಕ್ರವಾರ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ‘ನೂತನ ಕೃಷಿ ಕಾಯ್ದೆಗಳಲ್ಲಿ ತಿದ್ದುಪಡಿಗೆ ಸರ್ಕಾರ ಸಮ್ಮತಿಸಿದೆ ಎಂದ ಮಾತ್ರಕ್ಕೆ, ಈ ಕಾಯ್ದೆಗಳಲ್ಲಿ ಲೋಪದೋಷಗಳಿವೆ ಎಂದರ್ಥವಲ್ಲ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಶುಕ್ರವಾರ ಹೇಳಿದರು.

ನೂತನ ಕೃಷಿ ಕಾಯ್ದೆಗಳ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ, ‘ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುವವರಾಗಲೀ, ಅವರ ಬಗ್ಗೆ ಸಹಾನುಭೂತಿ ಹೊಂದಿರುವವರಾಗಲೀ ಈ ಕಾಯ್ದೆಗಳಲ್ಲಿರುವ ಲೋಪಗಳನ್ನು ತಿಳಿಸಲು ವಿಫಲರಾಗಿದ್ದಾರೆ’ ಎಂದರು.

ಈ ಕಾಯ್ದೆಗಳನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ ಎಂಬ ವಿರೋಧ ಪಕ್ಷಗಳ ಹೇಳಿಕೆಯನ್ನು ತಳ್ಳಿ ಹಾಕಿದ ಅವರು, ‘ಕೇವಲ ಒಂದು ರಾಜ್ಯದ ರೈತರು ಪ್ರತಿಭಟಿಸುತ್ತಿದ್ದಾರೆ. ಅವರಿಗೆ ತಪ್ಪು ಮಾಹಿತಿ ನೀಡಿದ್ದಲ್ಲದೇ, ಪ್ರತಿಭಟನೆಗೆ ಪ್ರಚೋದಿಸಲಾಗುತ್ತಿದೆ’ ಎಂದು ತಿರುಗೇಟು ನೀಡಿದರು.

‘ರೈತರ ಹಿತ ರಕ್ಷಣೆಗೆ ಸರ್ಕಾರ ಬದ್ದ. ಮಂಡಿ ವ್ಯವಸ್ಥೆ, ಕನಿಷ್ಠ ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನಗಳ ಖರೀದಿ ಮುಂದುವರಿಯುವುದು’ ಎಂದು ಹೇಳುವ ಮೂಲಕ ನೂತನ ಕೃಷಿ ಕಾಯ್ದೆಗಳನ್ನು ಅವರು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.