ನವದೆಹಲಿ: ಮನೆಯಲ್ಲೇ ತಯಾರಿಸಿದ ಮಾಸ್ಕ್‌ಗಳ ಬಳಕೆಯು, ಕೊರೊನಾ ವೈರಾಣು ಹರಡುವಿಕೆಯಲ್ಲಿ ಶೇ 70ರಷ್ಟು ಪರಿಣಾಮಕಾರಿ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿ ಹೇಳಿದೆ. ಮನೆಯಲ್ಲೇ ತಯಾರಿಸಿದ ಮಾಸ್ಕ್‌ಗಳಿಗೆ ಸಂಬಂಧಿಸಿದ 16 ಪುಟಗಳ ಕೈಪಿಡಿಯನ್ನು ಈ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದೆ.
ಕೊರೊನಾ ವೈರಾಣು ಉಸಿರಾಟದ ಮೂಲಕ ಮಾನವನ ದೇಹವನ್ನು ಸೇರುತ್ತದೆ. ಪರಿಣಾಮಕಾರಿಯಾದ ಮಾಸ್ಕ್ ಧರಿಸಿದರೆ, ಕೋವಿಡ್–19 ಪೀಡಿತರು ಸೀನಿದ/ಕೆಮ್ಮಿದ ಗಾಳಿಯಲ್ಲಿ ಇರುವ ಕೊರೊನಾ ವೈರಾಣು ಉಸಿರಾಟದ ಮೂಲಕ ಇತರರ ದೇಹ ಸೇರುವುದನ್ನು ತಡೆಯಬಹುದು ಎಂದು ಕೈಪಿಡಿಯಲ್ಲಿ ವಿವರಿಸಲಾಗಿದೆ.
‘ದೇಶದ ಶೇ 50ರಷ್ಟು ಜನರು ಮಾಸ್ಕ್ ಧರಿಸಿದರೆ, ಶೇ 50ರಷ್ಟು ಜನರಿಗೆ ಮಾತ್ರ ಸೋಂಕು ತಗಲುತ್ತದೆ. ಆದರೆ, ಶೇ 80ರಷ್ಟು ಜನರು ಮಾಸ್ಕ್ ಧರಿಸಿದರೆ ಸೋಂಕುಮಾರಿ ಹರಡುವುದನ್ನು ತಕ್ಷಣವೇ ತಡೆಯಬಹುದು’ ಎಂದು ಕೈಪಿಡಿಯಲ್ಲಿ ವಿವರಿಸಲಾಗಿದೆ.
ಮಾಸ್ಕ್...
* ಮನೆಯಲ್ಲೇ ತಯಾರಿಸುವ ಮಾಸ್ಕ್‌ಗಳಿಗೆ ಬಳಸುವ ಬಟ್ಟೆಯು ಶೇ 100ರಷ್ಟು ಹತ್ತಿಯದ್ದಾಗಿರಬೇಕು. ಬನಿಯನ್, ಟೀ ಶರ್ಟ್ ಮತ್ತು ಕರ್ಚೀಫುಗಳನ್ನು ಬಳಸಿ ಇಂತಹ ಮಾಸ್ಕ್ ತಯಾರಿಸಬಹುದು.
* ಈ ಮಾಸ್ಕ್‌ಗಳು ಎರಡು ಮಡಿಕೆ ಹೊಂದಿರಬೇಕು. ಹೀಗೆ ಮಾಡಿದರೆ, ಕೊರೊನಾ ವೈರಾಣುಗಿಂತ ಐದುಪಟ್ಟು ಸಣ್ಣದಿರುವ ವೈರಾಣುಗಳನ್ನೂ ಈ ಮಾಸ್ಕ್‌ಗಳು ತಡೆಯುತ್ತವೆ.
* ಮಾಸ್ಕ್ ತಯಾರಿಸುವ ಮುನ್ನ ಕುದಿಸುವ ನೀರಿನಲ್ಲಿ ಉಪ್ಪು ಹಾಕಿ, ಈ ಬಟ್ಟೆಗಳನ್ನು ಐದು ನಿಮಿಷ ಕುದಿಸಬೇಕು. ನಂತರ ಚೆನ್ನಾಗಿ ತೊಳೆಯಬೇಕು.
* ಈ ಮಾಸ್ಕ್‌ಗಳನ್ನು ಮರುಬಳಕೆ ಮಾಡಬಹುದಾಗಿದೆ. ಆದರೆ, ದಿನಕ್ಕೊಮ್ಮೆ ಬಿಸಿನೀರಿನಲ್ಲಿ ತೊಳೆದು ಬಳಸಬೇಕು.
* ಈ ಮಾಸ್ಕ್‌ಗಳು ಕೊರೊನಾ ವೈರಾಣು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆಯೇ ಹೊರತು, ಸಂಪೂರ್ಣ ಸುರಕ್ಷೆ ನೀಡುವುದಿಲ್ಲ.
* ವೈದ್ಯಕೀಯ ಮಾಸ್ಕ್‌ಗಳ ಕೊರತೆ ಉಂಟಾದರೆ, ಇವುಗಳನ್ನು ಬಳಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.