ADVERTISEMENT

‘ಅಧಿಕಾರವಿದ್ದೂ ರೈತ ಎನ್ನುತ್ತಿದ್ದ ದೇವೇಗೌಡ’

ಮಾಜಿ ಪ್ರಧಾನಿ ಚಂದ್ರಶೇಖರ್‌ ಜೀವನಚರಿತ್ರೆಯಲ್ಲಿ ಉಲ್ಲೇಖ

ಶೆಮಿಜ್‌ ಜಾಯ್‌
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST
ಚಂದ್ರಶೇಖರ್‌
ಚಂದ್ರಶೇಖರ್‌   

ನವದೆಹಲಿ:ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಅಧಿಕಾರದಲ್ಲಿದ್ದಾಗಲೂ ‘ನಾನೊಬ್ಬ ಸಾಮಾನ್ಯ ರೈತ’ ಎಂದು ಅನೇಕ ಬಾರಿ ಹೇಳಿದ್ದಿದೆ. ಪಕ್ಷದ ಕಾರ್ಯಕರ್ತರು ಮತ್ತು ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ಗೌಡರು ಇಂಥ ಮಾತುಗಳನ್ನಾಡುತ್ತಿದ್ದರೇ? ಅಥವಾ ಅದು ಪ್ರಚಾರದ ಗಿಮಿಕ್‌ ಆಗಿತ್ತೇ?

ಎರಡೂ ಅಲ್ಲ, ‘ಭವಿಷ್ಯದ ತಮ್ಮ ಯೋಜನೆಗಳಿಗೆ ಅಡಿಪಾಯ ಹಾಕುವ ಉದ್ದೇಶದಿಂದ ಅವರು ಇಂಥ ಭಾವ
ನಾತ್ಮಕ ಮಾತುಗಳನ್ನಾಡುತ್ತಿದ್ದರು...’

ಮಾಜಿ ಪ್ರಧಾನಿ ಚಂದ್ರಶೇಖರ್‌ ಅವರು ದೇವೇಗೌಡರ ಬಗ್ಗೆ ಈ ಮಾತುಗಳನ್ನು ಹೇಳಿದ್ದರಂತೆ. ಇಂಥ ಮಾತು
ಗಳನ್ನು ಆಡದಂತೆ ಅವರು ದೇವೇಗೌಡರಿಗೆ ಸಲಹೆಯನ್ನೂ ನೀಡಿದ್ದರಂತೆ... ಸದ್ಯದಲ್ಲೇ ಬಿಡುಗಡೆಯಾಗಲಿರುವ ಪುಸ್ತಕವೊಂದರಲ್ಲಿ ಈ ಉಲ್ಲೇಖ ಇದೆ.

ADVERTISEMENT

ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್‌ ಮತ್ತು ಸಂಶೋಧಕ ರವಿದತ್ತ ವಾಜಪೇಯಿ ಅವರು ಬರೆದ, ಮಾಜಿ ಪ್ರಧಾನಿ ಚಂದ್ರಶೇಖರ್‌ ಅವರ ಜೀವನಚರಿತ್ರೆ, ‘ಚಂದ್ರಶೇಖರ್‌: ದಿ ಲಾಸ್ಟ್‌ ಐಕಾನ್‌ ಆಫ್‌ ಐಡಿಯಲಾಜಿಕಲ್‌ ಪಾಲಿಟಿಕ್ಸ್‌’ ಕೃತಿಯು ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಅದರಲ್ಲಿ ಈ ವಿವರಗಳಿವೆ.

ಚಂದ್ರಶೇಖರ್‌ ಅವರು 1990ರ ನವೆಂಬರ್‌ನಿಂದ 1991ರ ಜೂನ್‌ವರೆಗೆ ದೇಶದ ಪ್ರಧಾನಿಯಾಗಿದ್ದರು. 2007ರ ಜುಲೈನಲ್ಲಿ ಅವರು ನಿಧನರಾದರು. ಕೃತಿಯ ರಚನಕಾರ ಹರಿವಂಶ್‌ ಪತ್ರಕರ್ತ. ಸಂಯುಕ್ತ ಜನತಾ ದಳದಿಂದ ಹಿಂದೆ ಸಂಸದರೂ ಆಗಿದ್ದ ಅವರು ಚಂದ್ರಶೇಖರ್‌ ಅವರ ಆತ್ಮೀಯರಾಗಿದ್ದರು. ಚಂದ್ರಶೇಖರ್‌ ಪ್ರಧಾನಿಯಾಗಿದ್ದಾಗ ಹೆಚ್ಚುವರಿ ವಾರ್ತಾಧಿಕಾರಿಯೂ ಆಗಿದ್ದರು.

‘ತಮ್ಮ ಕೈಯಲ್ಲಿ ಎಲ್ಲಾ ಅಧಿಕಾರ ಇದ್ದಾಗ, ‘ನಾನು ಸಾಮಾನ್ಯ ರೈತ’ ಎಂದು ಹೇಳುವ ಮೂಲಕ ದೇವೇಗೌಡರು ರಾಷ್ಟ್ರ ಮತ್ತು ಪ್ರಧಾನಿ ಹುದ್ದೆಗೆ ಅಪಮಾನ ಮಾಡಿದ್ದರು ಎಂದು ಚಂದ್ರಶೇಖರ್‌ ಭಾವಿಸಿದ್ದರು. ‘ನಾನೊಬ್ಬ ಸಾಮಾನ್ಯ ರೈತ’ ಎಂದು ಹೇಳಿಕೊಳ್ಳುವುದು ದೇವೇಗೌಡರಿಗೆ ಪ್ರೀತಿಯ ವಿಚಾರವಾಗಿತ್ತು. ಅವರು 1996ರಲ್ಲಿ ಅನಿರೀಕ್ಷಿತವಾಗಿ ಪ್ರಧಾನಿಯಾದರು. ಆಗ ಅವರನ್ನು ಭೇಟಿಮಾಡಿದ್ದ ಚಂದ್ರಶೇಖರ್‌ ‘ಅಧಿಕಾರದ ಚುಕ್ಕಾಣಿ ಹಿಡಿದ ನೀವು ಈಗ ರೈತನಾಗಿ ಉಳಿದಿಲ್ಲ.

ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾದ ನಿಮ್ಮ ಕೈಯಲ್ಲಿ ಆಡಳಿತ, ಸೇನಾಪಡೆ ಮತ್ತು ದೇಶದ ಎಲ್ಲಾ ಸಂಪತ್ತಿನ ಸೂತ್ರ ಇರುತ್ತದೆ. ಹೀಗಿರುವಾಗ ನಿಮ್ಮನ್ನು ನೀವು ‘ದುರ್ಬಲ’ ಎಂಬಂತೆ ಬಿಂಬಿಸಬಾರದು’ ಎಂಬ ಸಲಹೆಯನ್ನೂ ನೀಡಿದ್ದರು’ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಈ ಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರುಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ.

ಮಾಜಿ ಪ್ರಧಾನಿ ವಿ.ಪಿ. ಸಿಂಗ್‌ ಬಗ್ಗೆಯೂ ಚಂದ್ರಶೇಖರ್‌ ಇಂಥದ್ದೇ ಅಭಿಪ್ರಾಯ ಹೊಂದಿದ್ದರು. ಕಾಂಗ್ರೆಸ್‌ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನೇ ಪ್ರಚಾರದ ಅಸ್ತ್ರವಾಗಿಸಿಕೊಂಡು ವಿ.ಪಿ. ಸಿಂಗ್‌ ಅವರು ಅಧಿಕಾರ ಹಿಡಿದಿದ್ದರು. ಆದರೆ ಪ್ರಧಾನಿಯಾಗುತ್ತಿದ್ದಂತೆಯೇ ಅವರ ರಾಡಾರ್‌ನಿಂದ ಬೊಪೋರ್ಸ್ ಪ್ರಕರಣ ನಿಗೂಢವಾಗಿ ನಾಪತ್ತೆಯಾಯಿತು. ಸಿಂಗ್‌ ಅವರು ‘ಭಾರತೀಯ ರಾಜಕಾರಣದ ಉದ್ಧಾರಕ’ ಎಂಬುದನ್ನು ಚಂದ್ರಶೇಖರ್‌ ಯಾವತ್ತೂ ಒಪ್ಪಿರಲಿಲ್ಲ.

ರಾಜೀವ್‌ ಗಾಂಧಿ ಅವರ ಸಂಪುಟಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದ ವಿ.ಪಿ. ಸಿಂಗ್‌, ಆ ನಂತರ ಸೊಂಟಕ್ಕೆ ತೆಳ್ಳನೆಯ ಖಾದಿ ಧೋತಿ ಸುತ್ತಿಕೊಂಡು ಬೆತ್ತಲೆ ಶರೀರದಲ್ಲಿ ‘ಗಾಂಧಿಯ ಅವತಾರ’ ಎಂಬಂತೆ ಓಡಾಡುತ್ತಿದ್ದರು. ಆದರೆ ಪಕ್ಷದ ಸಭೆಯಲ್ಲಿ ಅವರು ಮುಂದಿನ ಪ್ರಧಾನಿ ಎಂದು ಘೋಷಣೆಯಾದ ಕೂಡಲೇ, ಪ್ರಮಾಣವಚನ ಸ್ವೀಕಾರದ ದಿನ ಧರಿಸಲು ಹೊಸ ಶೇರ್ವಾನಿ–ಚೂಡಿದಾರ್‌ ಹೊಲಿಸುವಂತೆ ಸೂಚನೆ ನೀಡಿದ್ದರು ಎಂದು ಕೃತಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.