ADVERTISEMENT

ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಲಿರುವ ಗ್ರಾ.ಪಂ. ಫಲಿತಾಂಶ

ಮಹಾರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 8:23 IST
Last Updated 17 ಜನವರಿ 2021, 8:23 IST
.
.   

ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಗಳು ಮಹತ್ವ ಪಡೆದಿದ್ದು, ಮಹಾ ವಿಕಾಸ ಅಘಾಡಿ ಮತ್ತು ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿವೆ.

ಸೋಮವಾರ ಮತ್ತು ಮಂಗಳವಾರ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ. ಶಿವಸೇನಾ, ಕಾಂಗ್ರೆಸ್‌, ಎನ್‌ಸಿಪಿ ಹಾಗೂ ವಿರೋಧ ಪಕ್ಷ ಬಿಜೆಪಿಗೆ ಈ ಚುನಾವಣೆಗಳ ಫಲಿತಾಂಶ ಮಹತ್ವದ್ದಾಗಿದೆ.

ಬೇರುಮಟ್ಟದ ವ್ಯವಸ್ಥೆಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ವಿಭಿನ್ನವಾಗಿರುತ್ತದೆ. ರಾಜಕೀಯ ಪಕ್ಷಗಳ ಚಿಹ್ನೆಯನ್ನು ಬಳಸಲು ಅವಕಾಶವಿಲ್ಲ. ಅಭ್ಯರ್ಥಿಗಳು ತಮ್ಮದೇ ಆದ ಗುಂಪು ರಚಿಸಿಕೊಂಡು ಸ್ಪರ್ಧಿಸುವುದು ಸಾಮಾನ್ಯ. ಆದರೂ, ಹಲವು ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಳ್ಳುತ್ತಾರೆ. ಹೀಗಾಗಿ, ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲವೂ ಇವರಿಗೆ ದೊರೆಯುತ್ತಿದೆ. ಇದರಿಂದಾಗಿ, ರಾಜಕೀಯ ಪಕ್ಷಗಳ ಬಲಾಬಲಕ್ಕೂ ಈ ಚುನಾವಣೆಗಳು ವೇದಿಕೆಯಾಗಿವೆ.

ADVERTISEMENT

ಮಹಾರಾಷ್ಟ್ರದಲ್ಲಿನ ಒಟ್ಟು 27,920 ಗ್ರಾಮ ಪಂಚಾಯಿತಿಗಳಲ್ಲಿ 14,234 ಗ್ರಾಮ ಪಂಚಾಯಿತಿಗಳಿಗೆ ಜನವರಿ 15ರಂದು ಮತದಾನ ನಿಗದಿಯಾಗಿತ್ತು. ಆದರೆ, ಹಲವು ಗ್ರಾಮಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದರಿಂದ 12,711 ಗ್ರಾಮ ಪಂಚಾಯಿತಿಗಳ 1,25,709 ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಮತದಾನ ನಡೆಯಿತು. ಒಟ್ಟು 2.41 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದರು. 26,718 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯದ 36 ಜಿಲ್ಲೆಗಳ ಪೈಕಿ 34 ಜಿಲ್ಲೆಗಳಲ್ಲಿ ಚುನಾವಣೆ ನಡೆದಿದ್ದು, ಶೇಕಡ 79ರಷ್ಟು ಮತದಾನವಾಗಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ ಜಯಭೇರಿ ಬಾರಿಸಿದ್ದರೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಯ ಸಾಧಿಸುವುದು ಸುಲಭವಲ್ಲ ಎಂದು ವಿಶ್ಲೇಷಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿತ್ತು.

2021–2022ರಲ್ಲಿ ಮಹಾನಗರ ಪಾಲಿಕೆಗಳ ಚುನಾವಣೆ ನಡೆಯಲಿರುವುದರಿಂದ ಬೇರುಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಚುನಾವಣೆಗಳು ಎಲ್ಲ ಪಕ್ಷಗಳಿಗೂ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.