ಸಂಗ್ರಹ ಚಿತ್ರ (ಪ್ರಾತಿನಿಧಿಕ)
ಹೈದರಾಬಾದ್: ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯ ಗ್ರಾನೈಟ್ ಕ್ವಾರಿಯಲ್ಲಿ ಭಾರಿ ಗಾತ್ರದ ಕಲ್ಲು ಕಾರ್ಮಿಕರ ಮೇಲೆ ಉರುಳಿಬಿದ್ದು ಒಡಿಶಾ ಮೂಲದ ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ.
‘ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಬಲ್ಲಿಕುರವ ಸಮೀಪದ ಸತ್ಯಕೃಷ್ಣ ಕ್ವಾರಿಯ ಒಂದು ಪಾರ್ಶ್ವ ನೀರು ಜಿನುಗಿದ ಕಾರಣ ಕುಸಿದು ಬಿದ್ದಿತ್ತು. ಈ ವೇಳೆ ಕೆಲಸ ಮಾಡುತ್ತಿದ್ದ 16 ಮಂದಿ ಮೇಲೆ ಬಂಡೆಗಲ್ಲು ಬಿದ್ದಿದ್ದವು. ಗಂಭೀರ ಗಾಯಗೊಂಡವರನ್ನು ನರಸರಾವ್‌ಪೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಶೇಷಗಳ ಅಡಿಯಿಂದ ಮೃತದೇಹ ಮೇಲಕ್ಕೆತ್ತಿ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಬಾಪಟ್ಲ ಜಿಲ್ಲಾಧಿಕಾರಿ ವೆಂಕಟ ಮುರಳಿ, ಎಸ್‌ಪಿ ತುಶಿರ್ ಡುಡಿ ತಿಳಿಸಿದ್ದಾರೆ.
ಘಟನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿ, ತನಿಖೆಗೆ ಆದೇಶಿಸಿದ್ದಾರೆ. ಕ್ವಾರಿಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.
'ತಮ್ಮ ಕುಟುಂಬಗಳಿಗಾಗಿ ಶ್ರಮಿಸುತ್ತಿದ್ದ ವಲಸೆ ಕಾರ್ಮಿಕರು ಈ ರೀತಿ ಮೃತಪಟ್ಟಿರುವುದು ನಿಜಕ್ಕೂ ಹೃದಯ ವಿದ್ರಾವಕ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ನೆರವು ಒದಗಿಸಬೇಕು ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು' ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.