ADVERTISEMENT

ಅತೀ ಹಿರಿಯ ಯೂಟ್ಯೂಬರ್ 'ಪಾಕ ಪ್ರವೀಣೆ' ಮಸ್ತಾನಮ್ಮ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 14:59 IST
Last Updated 5 ಡಿಸೆಂಬರ್ 2018, 14:59 IST
ಮಸ್ತಾನಮ್ಮ
ಮಸ್ತಾನಮ್ಮ   

ಬೆಂಗಳೂರು: ಯೂಟ್ಯೂಬ್‍ನಲ್ಲಿ ಅಡುಗೆ ರೆಸಿಪಿ ನೋಡುವವರಿಗೆ ಈ ಅಜ್ಜಿ ಚಿರಪರಿಚಿತರು. 107 ವಯಸ್ಸಿನ ಮಸ್ತಾನಮ್ಮ ಮಾಡುವ ವಿಧ ವಿಧ ಅಡುಗೆ ಯೂಟ್ಯೂಬ್‍ನಲ್ಲಿ ಜನಪ್ರಿಯವಾಗಿದೆ. ಅತೀ ಹಿರಿಯ ಶೆಫ್ ಎಂಬ ಹೆಗ್ಗಳಿಕೆಯೊಂದಿಗೆ, ಅತೀ ಹಿರಿಯ ವಯಸ್ಸಿನ ಯೂಟ್ಯೂಬರ್ ಎಂಬ ಖ್ಯಾತಿಯೂ ಆಂಧ್ರಪ್ರದೇಶದ ಈ ಮಸ್ತಾನಮ್ಮನದ್ದು.ಕಂಟ್ರೀ ಫುಡ್ಸ್ ಎಂಬ ಯೂಟ್ಯೂಬ್ ಚಾನೆಲ್‍ನಲ್ಲಿ ಅಡುಗೆ ವಿಧಾನಗಳನ್ನು ಪರಿಚಯಿಸುವ ಈ ಪಾಕ ಪ್ರವೀಣೆ ಸೋಮವಾರ ರಾತ್ರಿ ಗುಂಟೂರು ಜಿಲ್ಲೆಯ ಗುಡಿವಾಡ ಗ್ರಾಮದಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ.

ಈ ಅಜ್ಜಿ ತಯಾರಿಸುವ ಹಳ್ಳಿ ತಿಂಡಿಗಳ ವಿಡಿಯೊಗಳಿಗಾಗಿ 12ಲಕ್ಷಕ್ಕಿಂತಲೂ ಹೆಚ್ಚು ಮಂದಿ ಕಂಟ್ರೀ ಫುಡ್ಸ್ ಚಾನೆಲ್ ಚಂದಾದಾರರಾಗಿದ್ದಾರೆ.ಸುತ್ತಮುತ್ತ ಇರುವ ಸಾಮಾನ್ಯ ಭಕ್ಷ್ಯ ವಸ್ತುಗಳನ್ನು ಬಳಸಿ ತಯಾರಿಸುವ ಅಡುಗೆ ಮಸ್ತಾನಮ್ಮನದ್ದು ಆಗಿರುವುದರಿಂದ ಇತರ ರೆಸಿಪಿ ಚಾನೆಲ್‍ಗಳಿಗಿಂತ ಕಂಟ್ರೀ ಫುಡ್ಸ್ ಭಿನ್ನವಾಗಿದೆ.

ಮಸ್ತಾನಮ್ಮ ಅವರ ಮೊಮ್ಮಗ ಲಕ್ಷ್ಮಣ್ ಯೂಟ್ಯೂಬ್ ಚಾನೆಲ್ ನಿರ್ವಹಿಸುತ್ತಿದ್ದಾರೆ.ಆದರೆ ಅಡುಗೆಗೆ ಬೇಕಾದ ವಸ್ತುಗಳನ್ನು ತಂದುಕೊಡುವುದಕ್ಕೆ ಮಾತ್ರ ಇತರರ ಸಹಾಯ ಪಡೆಯುವ ಈಕೆ ಅಡುಗೆ ಮಾತ್ರ ಒಬ್ಬರೇ ಮಾಡುತ್ತಾರೆ.ಉಪ್ಪು, ಖಾರ ಎಲ್ಲ ಕೈಯಿಂದಲೇಹಾಕಿದರೆ ಮಾತ್ರ ಮಸ್ತಾನಮ್ಮಗೆ ತೃಪ್ತಿ.

ADVERTISEMENT

ಯೂಟ್ಯೂಬ್ ಚಾನೆಲ್ ಆರಂಭವಾಗಿದ್ದು ಹೀಗೆ
ಒಂದು ದಿನ ರಾತ್ರಿ ಹಸಿದಿದ್ದ ಲಕ್ಷ್ಮಣ್ ಮತ್ತು ಆತನ ಗೆಳೆಯರು ಆ ಹೊತ್ತಿಗೆ ಅಡುಗೆ ಮಾಡಿ, ಆ ವಿಡಿಯೊವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದರು.ಹಾಗೆ ಆ ವಿಡಿಯೊಗೆ ವೀಕ್ಷಣೆ ಹೆಚ್ಚಾಗುತ್ತಾ ಬಂತು.ಬ್ಯಾಚುಲರ್‌ಗಳಿಗೆ ಸುಲಭವಾಗಿ ತಯಾರಿಸಬಹುದಾದ ಅಡುಗೆ ಎಂಬ ಉದ್ದೇಶದಿಂದ ಇನ್ನಷ್ಟು ಅಡುಗೆ ವಿಡಿಯೊಗಳನ್ನು ಲಕ್ಷ್ಮಣ್ ಅಪ್‍ಲೋಡ್ ಮಾಡಿದರು. ಆ ವಿಡಿಯೊಗಳು ಹಿಟ್ ಆದಾಗ, ಆಂಧ್ರದ ಹಳ್ಳಿ ತಿಂಡಿಗಳ ಬಗ್ಗೆ ರೆಸಿಪಿ ವಿಡಿಯೊ ಯಾಕೆ ಆರಂಭಿಸಬಾರದು ಎಂಬ ಯೋಚನೆಹೊಳೆಯಿತು.
ಇಂತಿರುವಾಗ ಒಂದು ರಾತ್ರಿ ಲಕ್ಷ್ಮಣ್ ಅವರ ಮನೆಗೆ ಅವರ ಗೆಳೆಯರು ಬಂದಿದ್ದಾಗ ಅಜ್ಜಿಯ ಪಾಕಶಾಸ್ತ್ರ ಅರಿವಿಗೆ ಬಂತು. ತಮ್ಮ ವಿಡಿಯೊಗೆ ತಕ್ಕ ಪಾಕತಜ್ಞೆ ಸಿಕ್ಕಿದರು ಎಂಬ ಖುಷಿಲಕ್ಷ್ಮಣ್ ಮತ್ತು ಗೆಳೆಯರದ್ದು. ಅಲ್ಲಿಂದ ಅಜ್ಜಿಯ ಅಡುಗೆ ಕ್ಯಾಮೆರಾದಲ್ಲಿ ಸೆರೆಯಾಗಿ ಈವಿಡಿಯೊಗಳುಯೂಟ್ಯೂಬ್ ಮೂಲಕ ಜಗತ್ತೇ ಕಾಣುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.