ADVERTISEMENT

RSS ಕುರಿತ ಅಂಚೆ ಚೀಟಿ, ₹100 ನಾಣ್ಯ ಸಂವಿಧಾನಕ್ಕೆ ಮಾಡಿದ ಅವಮಾನ: ಸಿಪಿಐ(ಎಂ)

ಪಿಟಿಐ
Published 2 ಅಕ್ಟೋಬರ್ 2025, 4:30 IST
Last Updated 2 ಅಕ್ಟೋಬರ್ 2025, 4:30 IST
   

ನವದೆಹಲಿ: ಆರ್‌ಎಸ್‌ಎಸ್‌ನ ಶತಮಾನೋತ್ಸವದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆ ಚೀಟಿ ಮತ್ತು ₹100 ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿರುವುದನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ(ಎಂ), ‘ಆರ್‌ಎಸ್‌ಎಸ್ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆ ಚೀಟಿ ಮತ್ತು ₹100 ನಾಣ್ಯವನ್ನು ಬಿಡುಗಡೆ ಮಾಡಿರುವುದು ಭಾರತದ ಸಂವಿಧಾನಕ್ಕೆ ಮಾಡಿದ ಗಂಭೀರ ಗಾಯ ಮತ್ತು ಅವಮಾನವಾಗಿದೆ’ ಎಂದು ಹೇಳಿದೆ.

‘ಹಿಂದೂ ರಾಷ್ಟ್ರ ಪರಿಕಲ್ಪನೆಯ ಸಂಕೇತವಾಗಿ ಆರ್‌ಎಸ್‌ಎಸ್‌ ಪ್ರಚಾರ ಮಾಡಿದ ಭಾರತ ಮಾತೆಯ ಚಿತ್ರವನ್ನು ಅಧಿಕೃತ ನಾಣ್ಯದಲ್ಲಿ ಮುದ್ರಿಸಿರುವುದು ಆಕ್ಷೇಪಾರ್ಹವಾಗಿದೆ’ ಎಂದು ಅಸಮಾಧಾನ ಹೊರಹಾಕಿದೆ.

ADVERTISEMENT

‘1963ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಆರ್‌ಆರ್‌ಎಸ್‌ ಸ್ವಯಂ ಸೇವಕರು ಭಾಗವಹಿಸಿದ್ದನ್ನು ಅಂಚೆ ಚೀಟಿಯಲ್ಲಿ ಚಿತ್ರಿಸಲಾಗಿದೆ. ಇದು ಇತಿಹಾಸದ ವ್ಯಂಗ್ಯವಾಗಿದೆ. ನೆಹರೂ ಅವರು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲು ಆರ್‌ಎಸ್‌ಎಸ್‌ ಅನ್ನು ಆಹ್ವಾನಿಸಿದ್ದಾರೆ ಎಂಬುವುದು ಸುಳ್ಳನ್ನು ಆಧರಿಸಿದೆ. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿರುವುದು ದಾಖಲಾಗಿದೆ. ಆರ್‌ಆರ್‌ಎಸ್‌ ಸ್ವಯಂಸೇವಕರು ಭಾಗವಹಿಸಿರುವುದು ಕೇವಲ ಆಕಸ್ಮಿಕ’ ಎಂದು ಹೇಳಿದೆ.

‘ಸ್ವಾತಂತ್ರ್ಯ ಹೋರಾಟದಿಂದ ಆರ್‌ಆರ್‌ಎಸ್‌ ಸಂಪೂರ್ಣವಾಗಿ ದೂರವಿತ್ತು. ಬ್ರಿಟಿಷರ ಒಡೆದು ಆಳುವ ನೀತಿಯನ್ನೂ ಬೆಂಬಲಿಸಿತ್ತು. ವಸಾಹತುಶಾಹಿ ಆಳ್ವಿಕೆ ವಿರುದ್ಧ ಭಾರತ ಜನರ ಐಕ್ಯತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿತ್ತು’ ಎಂದು ಹೇಳಿದೆ.

‘ಇದು ಆರ್‌ಎಸ್‌ಎಸ್‌ನ ನಿಜವಾದ ಇತಿಹಾಸವಾಗಿದೆ. ಪ್ರಧಾನಿಯವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಆರ್‌ಎಸ್‌ಎಸ್‌ ಇತಿಹಾಸವನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ. ಆ ಮೂಲಕ ತಾವು ಹೊಂದಿರುವ ಸಾಂವಿಧಾನಿಕ ಸ್ಥಾನದ ಘನತೆಯ ಕುಂದಿಸಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.