ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೊಳಿಸಿ ಇಂದಿಗೆ(ಜುಲೈ 1) ಒಂದು ವರ್ಷ. ಮೊದಲ ವರ್ಷಾಚರಣೆ ವೇಳೆ ಕಾಂಗ್ರೆಸ್ ಮುಖಂಡ, ಹಣಕಾಸು ಮಾಜಿ ಸಚಿವ ಪಿ.ಚಿದಂಬರಂ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದು, ಇದು ಸಾಮಾನ್ಯ ಜನರ ಮೇಲೆ ತೆರಿಗೆಯನ್ನು ಹೇರಿದೆ ಎಂದು ಹೇಳಿದ್ದಾರೆ.
ಜಿಎಸ್‌ಟಿ ಎಂಬುದು ಜನರಿಗೆ ನೀಡಿರುವ ಒಂದು ‘ಕೆಟ್ಟ ಪದ’ವಾಗಿದೆ ಎಂದು ಟೀಕಿಸಿರುವ ಚಿದಂಬರಂ, ವ್ಯಾಪಾರಿಗಳು, ಉದ್ಯಮಿಗಳು, ರಫ್ತುದಾರರು ಮತ್ತು ಸಾಮಾನ್ಯ ನಾಗರಿಕರಿಗೆ ಜಿಎಸ್‌ಟಿ ಅನುಷ್ಠಾನವು ಕೆಟ್ಟದಾಗಿ ಪರಿಣಮಿಸಿದೆ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಜಿಎಸ್‌ಟಿ ಬಗ್ಗೆ ಸಂತೋಷವಾಗಿರುವಂತೆ ಕಾಣುವ ಏಕೈಕ ವಿಭಾಗವೆಂದರೆ ಅಸಾಧಾರಣ ಅಧೀಕಾರವನ್ನು ಪಡೆದ ತೆರಿಗೆ ಆಡಳಿತವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಜಿಎಸ್‌ಟಿಯು ಸಾಮಾನ್ಯ ನಾಗರಿಕರಿಗೆ ತೆರಿಗೆಯನ್ನು ಹೆಚ್ಚಿಸಿದೆ ಎಂದು ವ್ಯಾಪಕವಾಗಿ ಕೇಳಿಬಂದಿದೆ. ಇದು ನೀಡಿದ್ದ ಭವರಸೆಯಂತೆ ತೆರಿಗೆ ಹೊರೆಯನ್ನು ಕಡಿಮೆಗೊಳಿಸಿಲ್ಲ ಎಂದು ಚಿದಂಬರಂ ಹೇಳಿದ್ದಾರೆ.
ಜಿಎಸ್‌ಟಿ ಜಾರಿಗೊಳಿಸುವಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಆರಂಭದಿಂದಲೂ ಪ್ರತಿ ಹಂತದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ದೋಷಪೂರಿತವಾಗಿದೆ ಎಂದಿದ್ದಾರೆ.
ಜಿಎಸ್‌ಟಿ ಕಾಯ್ದೆಯು ಮುಖ್ಯ ಆರ್ಥಿಕ ಸಲಹೆಗಾರರು ನೀಡಿದ ಹಲವು ಅಂಶಗಳು ಮತ್ತು ಸಲಹೆಗಳನ್ನು ಕಡೆಗಣಿಸಿದೆ ಎಂದು ಚಿದಂಬರಂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.