ADVERTISEMENT

ತಗ್ಗಲಿದೆ ಸಣ್ಣ ವ್ಯಾಪಾರಿಗಳ ಮೇಲಿನ ಹೊರೆ: ಸಚಿವೆ ನಿರ್ಮಲಾ ಸೀತಾರಾಮನ್‌

ಮುಂದಿನ ತಲೆಮಾರಿನ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಕ್ರಮ: ನಿರ್ಮಲಾ ಸೀತಾರಾಮನ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 15:48 IST
Last Updated 2 ಸೆಪ್ಟೆಂಬರ್ 2025, 15:48 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ಚೆನ್ನೈ: ‘ಮುಂದಿನ ತಲೆಮಾರಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ’ಯು ಆರ್ಥಿಕತೆಯನ್ನು ಮುಕ್ತ ಮತ್ತು ಪಾರದರ್ಶಕವಾಗಿಸುತ್ತದೆ. ಮುಖ್ಯವಾಗಿ ಸಣ್ಣ ವ್ಯಾಪಾರಿಗಳ ಮೇಲಿನ ಹೊರೆಯನ್ನು ತಗ್ಗಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜಿಎಸ್‌ಟಿ ಮಂಡಳಿ ಸಭೆಯ ಮುನ್ನಾದಿನವಾದ ಮಂಗಳವಾರ ಹೇಳಿದರು.

ಕುಂಭಕೋಣಂನ ಸಿಟಿ ಯೂನಿಯನ್‌ ಬ್ಯಾಂಕ್‌ನ 120ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘2047ರ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಬ್ಯಾಂಕ್‌ಗಳು ಸಾಲ ಸೌಕರ್ಯ ವಿಸ್ತರಣೆಯಷ್ಟೇ ಅಲ್ಲದೆ, ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಹಣಕಾಸಿನ ಖಾತರಿ ನೀಡಬೇಕು. ಔಪಚಾರಿಕ ಬ್ಯಾಂಕಿಂಗ್‌ ವ್ಯವಸ್ಥೆಗೆ ಒಳಪಡದವರನ್ನು ತನ್ನ ವ್ಯಾಪ್ತಿಗೆ ತರಬೇಕು’ ಎಂದು ಸಲಹೆ ನೀಡಿದರು.

‘ಈ ಬದಲಾದ ಮಾರ್ಗದರ್ಶಿ ಸೂತ್ರಗಳು ತಂತ್ರಜ್ಞಾನ ಆಧಾರಿತವಾಗಿದ್ದು, ಪಾರದರ್ಶಕವಾಗಿರಬೇಕು’ ಎಂದ ನಿರ್ಮಲಾ ಸೀತಾರಾಮನ್‌, ಜಿಎಸ್‌ಟಿ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದ ಸುಧಾರಣೆ ತರಲು ಕಾರ್ಯಪಡೆ ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ದಿನ ಹೇಳಿದ್ದನ್ನು ನೆನಪು ಮಾಡಿಕೊಂಡರು.

ADVERTISEMENT

‘ವಾಣಿಜ್ಯ ಬ್ಯಾಂಕ್‌ಗಳು ಸಾಲ ವಸೂಲಾತಿಯಲ್ಲಿ ಗಮನಾರ್ಹ ಸಾಧನೆ ತೋರಿವೆ. ವಸೂಲಾಗದ ಸಾಲ (ಎನ್‌ಪಿಎ) ಪ್ರಮಾಣವು ಮಾರ್ಚ್‌ ವೇಳೆಗೆ ಶೇಕಡ 2.3ರಷ್ಟಕ್ಕೆ ತಗ್ಗಿದೆ’ ಎಂದು ಹೇಳಿದರು.

ಸಾಲ ವಿಸ್ತರಣೆ ಜತೆಗೆ ಮೂಲಸೌಕರ್ಯ ಅಭಿವೃದ್ಧಿ ಅಗತ್ಯ ಎಂಎಸ್‌ಎಂಇಗಳಿಗೆ ಹಣಕಾಸಿನ ಖಾತರಿ ಒದಗಿಸಲು ಸಲಹೆ ಶೇ 2.3ಕ್ಕೆ ತಗ್ಗಿದ ವಸೂಲಾಗದ ಸಾಲದ ಪ್ರಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.