ADVERTISEMENT

ಗೋಹತ್ಯೆ ಕೊನೆಗಾಣಿಸುವುದರಿಂದ ಜಗತ್ತನ್ನು ಕಾಪಾಡಬಹುದು: ನ್ಯಾಯಾಧೀಶ ಸಮೀರ್

ಗುಜರಾತ್‌ನ ಸೆಷನ್ಸ್‌ ನ್ಯಾಯಾಧೀಶ ಸಮೀರ್ ವಿನೋದ್‌ಚಂದ್ರ ವ್ಯಾಸ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 14:45 IST
Last Updated 23 ಜನವರಿ 2023, 14:45 IST
..
..   

ಅಹಮದಾಬಾದ್‌: ‘ಗೋಹತ್ಯೆ ಕೊನೆಗಾಣಿಸುವುದರಿಂದ ಇಡೀ ಜಗತ್ತನ್ನೇ ಕಾಪಾಡಬಹುದು’ ಎಂದು ದಕ್ಷಿಣ ಗುಜರಾತ್‌ನ ತಾಪಿ ಜಿಲ್ಲಾ ನ್ಯಾಯಾಲಯದ ಸೆಷನ್ಸ್‌ ನ್ಯಾಯಾಧೀಶ ಸಮೀರ್ ವಿನೋದ್‌ಚಂದ್ರ ವ್ಯಾಸ್‌ ಹೇಳಿದ್ದಾರೆ.

ಗೋವುಗಳ ಅಕ್ರಮ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ ಅವರು, ಆರೋಪಿ ಮೊಹಮ್ಮದ್‌ ಅಮಿನ್‌ ಆರೀಫ್‌ ಅಂಜುಮ್‌ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ₹5 ಲಕ್ಷ ದಂಡವನ್ನೂ ಹೇರಿದ್ದಾರೆ.

‘ಭಾರತದಲ್ಲಿ ಈಗಾಗಲೇ ಶೇ 75ರಷ್ಟು ಗೋ ಸಂಪತ್ತು ನಾಶವಾಗಿದೆ. ಸದ್ಯ ದೇಶದಲ್ಲಿ ಇರುವ ಜಾನುವಾರುಗಳ ಪ್ರಮಾಣ ಶೇ 25ರಷ್ಟು ಮಾತ್ರ. ಗೋ ಹತ್ಯೆ ಹೀಗೆ ಮುಂದುವರಿದರೆ ಮುಂದೊಂದು ದಿನ ಜಾನುವಾರುಗಳ ಚಿತ್ರ ಹೇಗೆ ಬಿಡಿಸಬೇಕು ಎಂಬುದನ್ನೇ ಜನ ಮರೆತುಬಿಡಬಹುದು’ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಹಸು ಕೇವಲ ಪ್ರಾಣಿಯಲ್ಲ. ಅದು ತಾಯಿ ಇದ್ದಂತೆ. ಹೀಗಾಗಿಯೇ ಅದನ್ನು ಗೋಮಾತೆ ಎಂದು ಕರೆಯುತ್ತೇವೆ. ಹಸುವಿನಷ್ಟು ಶ್ರೇಷ್ಠ ಹಾಗೂ ಕೃತಜ್ಞ ಪ್ರಾಣಿ ಮತ್ತೊಂದಿಲ್ಲ. ಯಾವಾಗ ಗೋವಿನ ಒಂದು ಹನಿ ರಕ್ತವೂ ಈ ಭೂಮಿ ಮೇಲೆ ಬೀಳುವುದಿಲ್ಲವೊ ಅಂದು ಈ ಜಗತ್ತಿನ ಎಲ್ಲಾ ಸಮಸ್ಯೆಗಳೂ ಬಗೆಹರಿದಂತೆ. ಗೋಹತ್ಯೆ ಹಾಗೂ ಅವುಗಳ ಅಕ್ರಮ ಸಾಗಾಣೆಯು ಅವ್ಯಾಹತವಾಗಿ ನಡೆಯುತ್ತಿದೆ. ಇದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ವಿಚಾರ’ ಎಂದಿದ್ದಾರೆ.

‘ಗುಣಪಡಿಸಲಾಗದ ಅನೇಕ ರೋಗಗಳು ಗೋಮೂತ್ರ ಸೇವನೆಯಿಂದ ವಾಸಿಯಾಗುತ್ತವೆ. ವೈಜ್ಞಾನಿಕವಾಗಿ ಇದು ಸಾಬೀತಾಗಿದೆ’ ಎಂದೂ ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಮಂಗಲಯಾರ್ಡ್‌ ನಿವಾಸಿಯಾಗಿರುವ ಮೊಹಮ್ಮದ್‌, ಟ್ರಕ್‌ ಮೂಲಕ 12 ಗೋವುಗಳನ್ನು ಸಾಗಣೆ ಮಾಡುತ್ತಿದ್ದ. ಈತನನ್ನು 2020ರ ಆಗಸ್ಟ್‌ನಲ್ಲಿ ತಾಪಿ ಜಿಲ್ಲೆಯ ನಿಜರ್‌ ಪೊಲೀಸ್‌ ಠಾಣೆಯ ಅಧಿಕಾರಿಗಳು ಬಂಧಿಸಿದ್ದರು.

ತನಗೆ ಇನ್ನೂ ಮದುವೆಯಾಗಿಲ್ಲ. ತಂದೆ–ತಾಯಿ ಕೂಡ ಇಲ್ಲ. ತಂಗಿಯನ್ನು ಸಾಕುವ ಜವಾಬ್ದಾರಿ ತನ್ನ ಮೇಲಿದೆ. ಇದನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣ ತಗ್ಗಿಸಬೇಕೆಂದು ಆರೋಪಿ ಮಾಡಿದ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.