ADVERTISEMENT

ಗುಜರಾತ್‌ನ ಮೊರ್ಬಿ ತೂಗುಸೇತುವೆ ದುರಂತದಲ್ಲಿ ಸತ್ತವರ ಸಂಖ್ಯೆ 136ಕ್ಕೆ ಏರಿಕೆ

ಮೊರ್ಬಿ ತೂಗುಸೇತುವೆ ದುರಂತ: ತನಿಖೆಗೆ ಸಮಿತಿ, 9 ಜನರ ಬಂಧನ

ಏಜೆನ್ಸೀಸ್
Published 31 ಅಕ್ಟೋಬರ್ 2022, 19:57 IST
Last Updated 31 ಅಕ್ಟೋಬರ್ 2022, 19:57 IST
ಮೊರ್ಬಿಯ ಮಚ್ಚು ನದಿಯ ತೂಗುಸೇತುವೆ ಕುಸಿದ ಸ್ಥಳದಲ್ಲಿ ಸೋಮವಾರ ರಕ್ಷಣಾ ಕಾರ್ಯ ನಡೆಯಿತು –ಪಿಟಿಐ ಚಿತ್ರ
ಮೊರ್ಬಿಯ ಮಚ್ಚು ನದಿಯ ತೂಗುಸೇತುವೆ ಕುಸಿದ ಸ್ಥಳದಲ್ಲಿ ಸೋಮವಾರ ರಕ್ಷಣಾ ಕಾರ್ಯ ನಡೆಯಿತು –ಪಿಟಿಐ ಚಿತ್ರ   

ಮೊರ್ಬಿ : ಗುಜರಾತ್‌ನ ಮೊರ್ಬಿ ತೂಗುಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ ಸಂಜೆಯ ವೇಳೆಗೆ 136ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವವರ ಶೋಧಕಾರ್ಯ ಮುಂದುವರಿದಿದೆ.

ದುರಂತಕ್ಕೆ ಸಂಬಂಧಿಸಿದಂತೆ ಮೊರ್ಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಈವರೆಗೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಅವಘಡದ ತನಿಖೆಗೆ ರಾಜ್ಯ ಸರ್ಕಾರವು ತನಿಖಾ ತಂಡವನ್ನು ರಚಿಸಿದೆ.

ನಾಪತ್ತೆಯಾಗಿರುವವರ ಕುಟುಂಬದ ಸದಸ್ಯರು ಅವಘಡದ ಸ್ಥಳದಲ್ಲಿ ಮತ್ತು ಆಸ್ಪತ್ರೆ ಎದುರು ಗೋಳಾಡುತ್ತಿದ್ದಾರೆ. ಸೇತುವೆಗೆ ಸಮೀಪ ದಲ್ಲೇ ಇರುವ ರುದ್ರಭೂಮಿಯಲ್ಲಿ ಸೋಮವಾರವೇ 100ಕ್ಕೂ ಹೆಚ್ಚು ಜನರ ಅಂತ್ಯಕ್ರಿಯೆ ನಡೆಸಲಾಗಿದೆ. ಆಂಬುಲೆನ್ಸ್‌ಗಳು ಘಟನಾ ಸ್ಥಳದಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ರುದ್ರಭೂಮಿಗೆ ಎಡೆಬಿಡದೆ ಸಂಚರಿಸಿವೆ.

ADVERTISEMENT

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಮತ್ತು ಗೃಹ ಸಚಿವ ಹರ್ಷ ಸಂಘ್ವಿ ಅವರು ಸ್ಥಳದಲ್ಲೇ ಇದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.ಭಾನುವಾರ ಸಂಜೆ ಆರಂಭವಾದ ಶೋಧ ಕಾರ್ಯವು ಸೋಮವಾರ ರಾತ್ರಿಯೂ ಮುಂದುವರಿ ದಿತ್ತು.

ಈವರೆಗೆ ಒಟ್ಟು 136 ಶವಗಳನ್ನು ಹೊರಗೆ ತೆಗೆಯಲಾಗಿದೆ. ಮೃತರಲ್ಲಿ 50 ಮಕ್ಕಳು ಮತ್ತು 40 ಮಹಿಳೆಯರು ಸೇರಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಈವರೆಗೆ ಒಟ್ಟು 170 ಜನರನ್ನು ರಕ್ಷಿಸ ಲಾಗಿದೆ. ಅವರಿಗೆ ಮೊರ್ಬಿ ಆಸ್ಪತ್ರೆ
ಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಲವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಅವಘಡದಲ್ಲಿ ಇನ್ನೂ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೊರ್ಬಿ ಜಿಲ್ಲಾ ಡಳಿತವು ಹೇಳಿದೆ.

ಅವಘಡದ ಸಂಬಂಧ ಮೊರ್ಬಿ ‘ಬಿ’ ವಿಭಾಗೀಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೇತುವೆಯ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಒರೆವಾ ಗ್ರೂಪ್‌ ಕಂಪನಿಯ ನಾಲ್ವರು ನೌಕರರು ಸೇರಿ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸೇತುವೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿದ್ದ ಇಬ್ಬರು ನಿರ್ವಾಹಕರು ಮತ್ತು ಟಿಕೆಟ್‌ ನೀಡುವ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಒರೆವಾ ಕಂಪನಿಯ ನೌಕರರ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ಎಫ್‌ಐಆರ್‌
ನಲ್ಲಿ ಉಲ್ಲೇಖಿಸಲಾಗಿದೆ. ನವೀಕರಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದು ಕೊಂಡಿಲ್ಲ. ಸೇತುವೆಯು ಬಳಕೆಗೆ ಯೋಗ್ಯವಾಗಿದೆಯೇ ಎಂಬುದಕ್ಕೆ ಪ್ರಮಾಣಪತ್ರ ಪಡೆದಿಲ್ಲ. ಹೀಗಿದ್ದೂ ಸೇತುವೆಯನ್ನು ಮರುಉದ್ಘಾಟನೆ ಮಾಡಲಾಗಿದೆ. ಜನರ ಜೀವಕ್ಕೆ ಅಪಾಯವಿದೆ ಎಂಬ ಅರಿವಿದ್ದರೂ ಕಂಪನಿಯ ಸಿಬ್ಬಂದಿಯು ನಿರ್ಲಕ್ಷ್ಯ ತೋರಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಸೇತುವೆ ಮೇಲೆ ಬಿಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ರಾಜ್ಯ ಸರ್ಕಾರವು ರಚಿಸಿರುವ ತನಿಖಾ ತಂಡವು, ಅವಘಡಕ್ಕೆ ಕಾರಣ ಏನು ಎಂಬುದನ್ನು ಪತ್ತೆ
ಮಾಡುವತ್ತ ಗಮನ ಕೇಂದ್ರೀಕರಿಸಿದೆ. ತನಿಖಾ ತಂಡದಲ್ಲಿರುವ ವಿಧಿವಿಜ್ಞಾನ ಅಧಿಕಾರಿಗಳು, ಸೇತುವೆಯ ಭಾಗಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲೇ ಇದ್ದರೂ, ಮೊರ್ಬಿಗೆ ಭೇಟಿ ನೀಡಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ರಾಜ್ಯದ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ನಡೆದ ಸರ್ದಾರ್ ವಲ್ಲಭಬಾಯ್ ಪಟೇಲ್‌ ಅವರ ಜನ್ಮದಿನಾಚರಣೆಯಲ್ಲಿ ಮೋದಿ ಭಾಗಿಯಾಗಿದ್ದರು. ಇದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಮೋದಿ ಅವರು ಮಂಗಳವಾರ ಮೊರ್ಬಿಗೆ ಭೇಟಿ ನೀಡಲಿದ್ದಾರೆ. ಮೋದಿ ಅವರು ಗಾಂಧಿನಗರದಲ್ಲಿನ ರಾಜಭವನದಲ್ಲಿ ಸೋಮವಾರ ಸಂಜೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದಿದ್ದಾರೆ.

ರಾಜ್ಯದಲ್ಲಿವೆ ಶಿಥಿಲಾವಸ್ಥೆಯ 56 ಸೇತುವೆಗಳು

ಬೆಂಗಳೂರು: ರಾಜ್ಯದಾದ್ಯಂತ 56 ಸೇತುವೆಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳನ್ನು ಬಲಪಡಿಸುವಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಸರ್ಕಾರಕ್ಕೆ ವರದಿ ನೀಡಿದೆ.

‌ಕಳೆದ ಬಜೆಟ್‌ನಲ್ಲಿ (2022–23) ಈ ಬಗ್ಗೆ ವಿವರವಾದ ಕಾರ್ಯ ಸಾಧ್ಯತಾ ವರದಿ (ಡಿಎಫ್‌ಆರ್) ತಯಾರಿಸಲು ನಿಗಮಕ್ಕೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ, ಈವ ರೆಗೆ ಅನುದಾನ ಹಂಚಿಕೆ ಮಾಡಿಲ್ಲ.

‘ನಾವು ವಿವರವಾದ ಕಾರ್ಯ ಸಾಧ್ಯತಾ ವರದಿಯನ್ನು ಸಿದ್ಧಪಡಿಸಿ ಮೂರು ತಿಂಗಳ ಹಿಂದೆಯೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆದರೆ, ಹಣ ಮಂಜೂರಾಗಿಲ್ಲ. ಅಲ್ಲದೆ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ಅಗತ್ಯವಿದೆ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಸೇತುವೆಗಳ ಪೈಕಿ, ಕೆಲ ಸೇತುವೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೆಲ ಸೇತುವೆಗಳು ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಅಪಾಯದ ಸ್ಥಿತಿಯಲ್ಲಿವೆ. ದುರಸ್ತಿ ಕಾಮಗಾರಿಯನ್ನು ಅತಿ ಶೀಘ್ರ ಕೈಗೊಳ್ಳಬೇಕಿದೆ. ಈ ಪಟ್ಟಿಯಲ್ಲಿರುವ ಹಲವು ಸೇತುವೆಗಳು 50 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದು, ವಾಹನಗಳ ಸಂಚಾರ ದಟ್ಟಣೆಯಿಂದ ದುರ್ಬಲಗೊಂಡಿವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.