ADVERTISEMENT

ಗೋಧ್ರೋತ್ತರ ಹತ್ಯಾಕಾಂಡ: 22 ಆರೋಪಿಗಳು ಖುಲಾಸೆ

ಪಿಟಿಐ
Published 25 ಜನವರಿ 2023, 23:16 IST
Last Updated 25 ಜನವರಿ 2023, 23:16 IST
   

ಅಹಮದಾಬಾದ್‌ : 2002ರ ಗೋಧ್ರೋತ್ತರ ಗಲಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ 17 ಮಂದಿಯನ್ನು ಹತ್ಯೆಗೈದಿದ್ದ ಪ್ರಕರಣದ 22 ಆರೋಪಿಗಳನ್ನು ಗುಜರಾತ್‌ನ ಪಂಚಮಹಲ್‌ ಜಿಲ್ಲೆಯ ಹಾಲೋಲ್‌ ನಗರ ನ್ಯಾಯಾಲಯವು ಮಂಗಳವಾರ ಖುಲಾಸೆಗೊಳಿಸಿದೆ.

‘ಹತ್ಯೆಯಾದವರ ಪೈಕಿ ಯಾರೊಬ್ಬರ ಮೃತದೇಹವೂ ಪತ್ತೆಯಾಗಿಲ್ಲ. ಮೂಳೆಗಳು ಸುಟ್ಟು ಕರಕಲಾಗಿದ್ದರಿಂದ ಡಿಎನ್‌ಎ ಪರೀಕ್ಷೆಯೂ ಸಾಧ್ಯವಾಗಿಲ್ಲ. ಆರೋಪಿಗಳನ್ನು ದೋಷಿಗಳೆಂದು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳೇ ಇಲ್ಲ. ಹೀಗಾಗಿ ಎಲ್ಲರನ್ನೂ ಪ್ರಕರಣದಿಂದ ಖುಲಾಸೆಗೊಳಿಸಲಾಗುತ್ತಿದೆ’ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಹರ್ಷ್‌ ತ್ರಿವೇದಿ ಹೇಳಿದ್ದಾರೆ.

‘ಮೃತದೇಹ ದೊರೆಯದ ಹೊರತು ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ಸಾಧ್ಯವಿಲ್ಲ. ಇದು ಸಾಮಾನ್ಯ ನಿಯಮ. ಎಲ್ಲಾ ಅಪರಾಧಗಳಿಗೂ ಇದು ಅನ್ವಯಿಸುತ್ತದೆ. ಯಾರಾದರೂ ಕಾಣೆಯಾದಾಗ ಪೊಲೀಸರಿಗೆ ದೇಹ ಅಥವಾ ಇತರೆ ಯಾವುದೇ ಪುರಾವೆ ದೊರೆಯದೆ ಹೋದರೆ ಅವರು ತನಿಖೆ ಕೈಗೊಳ್ಳುವುದಾದರೂ ಹೇಗೆ’ ಎಂದು ನ್ಯಾಯಪೀಠ ಪ್ರಶ್ನಿಸಿದೆ.

ADVERTISEMENT

2002ರ ಫೆಬ್ರುವರಿ 27ರಂದು ನಡೆದಿದ್ದ ಘಟನೆ ಸಂಬಂಧ 22 ಮಂದಿಯನ್ನು ಬಂಧಿಸಿದ್ದ ಪೊಲೀಸರು, 2004ರಲ್ಲಿ ನ್ಯಾಯಾಲಯಕ್ಕೆ ಎರಡು ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮೊದಲ ಚಾರ್ಜ್‌ಶೀಟ್‌ನಲ್ಲಿ ಮೂವರು ಹಾಗೂ ಇನ್ನೊಂದು ಚಾರ್ಜ್‌ಶೀಟ್‌ನಲ್ಲಿ 19 ಮಂದಿಯನ್ನು ಹೆಸರಿಸಿದ್ದರು. ಆರೋಪಿಗಳ ಪೈಕಿ 8 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. 14 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.