ADVERTISEMENT

ಅಹಮದಾಬಾದ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ತೀರ್ಪು: 49 ಮಂದಿ ತಪ್ಪಿತಸ್ಥರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 10:36 IST
Last Updated 8 ಫೆಬ್ರುವರಿ 2022, 10:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ಸುಮಾರು 200 ಮಂದಿ ಗಾಯಗೊಂಡು 56 ಮಂದಿ ಮೃತಪಟ್ಟ 2008ರ ಅಹಮದಾಬಾದ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ 28 ಮಂದಿಯನ್ನು ಖುಲಾಸೆಗೊಳಿಸಿದ ವಿಶೇಷ ನಿಯೋಜಿತ ನ್ಯಾಯಾಲಯ 49 ಮಂದಿಯನ್ನು ತಪ್ಪಿತಸ್ಥರೆಂದು ಮಂಗಳವಾರ ತೀರ್ಪು ನೀಡಿದೆ.

ಶಿಕ್ಷೆಯನ್ನು ಪ್ರಕಟಿಸುವ ಮುನ್ನ ನ್ಯಾಯಾಲಯವು ಬುಧವಾರ ತಪ್ಪಿತಸ್ಥರ ಮನವಿಯನ್ನು ಆಲಿಸಲಿದೆ.

ವರ್ಚುವಲ್‌ ಮೂಲಕ ವಿಚಾರಣೆ ನಡೆಸಿದ ವಿಶೇಷ ನಿಯೋಜಿತ ನ್ಯಾಯಾಧೀಶ ಅಂಬಾಲಾಲ್‌ ಆರ್‌.ಪಟೇಲ್‌ ತೀರ್ಪು ನೀಡಿದ್ದಾರೆ.302 (ಕೊಲೆ), 307 (ಕೊಲೆಗೆ ಯತ್ನ), ದೇಶದ್ರೋಹ, (124-A), ಧಾರ್ಮಿಕ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (153-A) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ 49 ಮಂದಿಯನ್ನು ತಪ್ಪಿತಸ್ಥರೆಂದು ಉಲ್ಲೇಖಿಸಿದ್ದಾರೆ.

ADVERTISEMENT

ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ 28 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.

2008ರ ಜುಲೈ 26 ರಂದು ಅಹಮದಾಬಾದ್‌ನಲ್ಲಿ ಏಕಕಾಲದಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ 56 ಜನರು ಸಾವನ್ನಪ್ಪಿದರು. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆ ಸಂಬಂಧ ಪೊಲೀಸರು ಅಹಮದಾಬಾದ್‌ನಲ್ಲಿ 20 ಎಫ್‌ಐಆರ್‌ ದಾಖಲಿಸಿದ್ದರು. ಸೂರತ್‌ನ ವಿವಿಧ ಸ್ಥಳಗಳಲ್ಲಿ ಬಾಂಬ್‌ ಪತ್ತೆಯಾಗಿದ್ದವು. ಈ ಸಂಬಂಧ 15 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಎರಡು ಪ್ರಕರಣಗಳನ್ನು ತನಿಖೆ ನಡೆಸಿದ್ದ ಪೊಲೀಸರು ಇದು ಇಂಡಿಯನ್‌ ಮುಜಾಹಿದ್ದೀನ್‌ ಭಯೋತ್ಪಾದಕ ಸಂಘಟನೆ ಕೃತ್ಯ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.