ADVERTISEMENT

ಗುಜರಾತ್‌: ಒಂದೇ ಕುಟುಂಬದ ಆರು ಸದಸ್ಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಪಿಟಿಐ
Published 19 ಜೂನ್ 2020, 14:27 IST
Last Updated 19 ಜೂನ್ 2020, 14:27 IST
ಆತ್ಮಹತ್ಯೆ–ಪ್ರಾತಿನಿಧಿಕ ಚಿತ್ರ
ಆತ್ಮಹತ್ಯೆ–ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌:ಏಳರಿಂದ 12 ವರ್ಷದ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರು ಯಾರೂ ವಾಸವಿಲ್ಲದಫ್ಲ್ಯಾಟ್ ಒಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನ ವಾಟ್ವಾ ಜಿಐಡಿಸಿ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಫ್ಲ್ಯಾಟ್‌ ಕುಟುಂಬಕ್ಕೇ ಸೇರಿದ್ದರೂ, ಇಲ್ಲಿ ಯಾರೂ ವಾಸವಿರಲಿಲ್ಲ. ಜೂನ್‌ 17ರಂದು ಅಮ್ರೀಷ್‌ ಪಟೇಲ್‌(42) ಹಾಗೂ ಅವರ ಸಹೋದರ ಗೌರಂಗ್‌ ಪಟೇಲ್‌ (40) ಸುತ್ತಾಡಿಕೊಂಡು ಬರುವುದಾಗಿ ಪತ್ನಿಯರಿಗೆ ತಿಳಿಸಿ ತಮ್ಮ ನಾಲ್ವರು ಮಕ್ಕಳೊಂದಿಗೆ ಮನೆಯಿಂದ ಹೋಗಿದ್ದರು. ಇಬ್ಬರೂ ಸಹೋದರರು ನಗರದ ಬೇರೆ ಬೇರೆ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ಇನ್‌ಸ್ಪೆಕ್ಟರ್‌ ಡಿ.ಆರ್.ಗೋಹಿಲ್‌ ತಿಳಿಸಿದರು.

ಪತಿ ಹಾಗೂ ಮಕ್ಕಳು ಮನೆಗೆ ಬಾರದೇ ಇದ್ದಾಗ, ಇಬ್ಬರ ಪತ್ನಿಯರೂ ಅವರನ್ನು ಹುಡುಕಿಕೊಂಡು ಫ್ಲ್ಯಾಟ್‌ಗೆ ತೆರಳಿದ್ದರು. ಫ್ಲ್ಯಾಟ್‌ನ ಬಾಗಿಲು ಒಳಗಿನಿಂದ ಚಿಲಕ ಹಾಕಿಕೊಂಡಿದ್ದ ಕಾರಣ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಗಿಲು ತೆಗೆದು ಒಳ ಪ್ರವೇಶಿಸಿದ ಸಂದರ್ಭದಲ್ಲಿ ಇಬ್ಬರು ಸಹೋದರರ ಶವ ಹಾಲ್‌ನಲ್ಲಿ, ಹೆಣ್ಣು ಮಕ್ಕಳಾದ ಕೃತಿ(9) ಹಾಗೂ ಸಾನ್ವಿ(7) ಶವ ಅಡುಗೆ ಕೋಣೆಯಲ್ಲಿ ಹಾಗೂ 12 ವರ್ಷದ ಇಬ್ಬರು ಗಂಡುಮಕ್ಕಳ ಶವ ಮಲಗುವ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ADVERTISEMENT

ನಿದ್ದೆಮಾತ್ರೆಗಳನ್ನು ನೀಡಿ ಮಕ್ಕಳು ನಿದ್ದೆ ಮಾಡಿದ ನಂತರ ಅವರನ್ನು ಕೊಂದು ನೇತು ಹಾಕಿ, ನಂತರ ತಾವೂ ನೇಣು ಹಾಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.