ADVERTISEMENT

ಬಜೆಟ್–2023: ಚುನಾವಣೆ ಆಶ್ವಾಸನೆಗಳ ಈಡೇರಿಕೆಗೆ ಆದ್ಯತೆ ನೀಡಿದ ಗುಜರಾತ್ ಸರ್ಕಾರ

ಪಿಟಿಐ
Published 24 ಫೆಬ್ರುವರಿ 2023, 9:49 IST
Last Updated 24 ಫೆಬ್ರುವರಿ 2023, 9:49 IST
ಗುಜರಾತ್‌ ವಿಧಾನಸಭೆ (ಪಿಟಿಐ ಚಿತ್ರ)
ಗುಜರಾತ್‌ ವಿಧಾನಸಭೆ (ಪಿಟಿಐ ಚಿತ್ರ)   

ಗಾಂಧಿನಗರ: ಜನಸಾಮಾನ್ಯರ ಮೇಲೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸದೆ, ₹ 3.01 ಲಕ್ಷ ಕೋಟಿ ಮೊತ್ತದ ಬಜೆಟ್‌ ಅನ್ನು ಗುಜರಾತ್ ಸರ್ಕಾರ ಶುಕ್ರವಾರ ಮಂಡಿಸಿದೆ.

ಹಣಕಾಸು ಸಚಿವ ಕನು ದೇಸಾಯಿ ಅವರು 2023–24ನೇ ಸಾಲಿನ ಆಯವ್ಯಯವನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರಕ್ಕೇರಿದ ಬಳಿಕ ಮಂಡನೆಯಾದ ಮೊದಲ ಬಜೆಟ್ ಇದಾಗಿದೆ.

2022ರ ವಿಧಾನಸಭೆ ಚುನಾವಣೆ ವೇಳೆ ಪಕ್ಷ ಆಶ್ವಾಸನೆ ನೀಡಿದ್ದ ಹಲವು ಯೋಜನೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವಿಮಾ ಮೊತ್ತವನ್ನು ದ್ವಿಗುಣಗೊಳಿಸುವುದು (₹ 5 ಲಕ್ಷದಿಂದ 10 ಲಕ್ಷಕ್ಕೆ ಏರಿಸುವುದು), ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ ಎರಡು ಗ್ಯಾಸ್‌ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದು ಸೇರಿದಂತೆ ಹಲವು ಭರವಸೆಗಳನ್ನು ಬಿಜೆಪಿ ನೀಡಿತ್ತು.

ADVERTISEMENT

ಬಜೆಟ್‌ ಮಂಡನೆ ವೇಳೆ ಮಾತನಾಡಿದ ದೇಸಾಯಿ, 'ಈ ಅಮೃತ ಕಾಲದಲ್ಲಿ (ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ) ಮುಂದಿನ 25 ವರ್ಷಗಳ ವರೆಗೆ ರಾಜ್ಯದ ಅಭಿವೃದ್ಧಿಯ ಪಥವನ್ನು ತೋರುವ ಬಜೆಟ್‌ ಅನ್ನು ಮಂಡಿಸಿದ್ದೇನೆ. 2023–24ರ ಅವಧಿಯ ಬಜೆಟ್‌ ಗಾತ್ರ ₹ 3.01 ಲಕ್ಷ ಕೋಟಿ ಆಗಿದೆ' ಎಂದು ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ರಾಜ್ಯದಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ₹ 5 ಲಕ್ಷ ಕೋಟಿ ವ್ಯಯಿಸಲಾಗುವುದು. ರಾಜ್ಯದ ಐದು ಹೆದ್ದಾರಿಗಳನ್ನು ₹ 1,500 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್‌ ಕಾರಿಡಾರ್‌ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಕ್ರೀಡಾ ಸಂಕೀರ್ಣಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ನಗರ ಪ್ರದೇಶದ ಸುಮಾರು 1 ಲಕ್ಷ ಜನರಿಗೆ ಮನೆ ನಿರ್ಮಿಸಲು ₹ 1,066 ಕೋಟಿ ವೆಚ್ಚ ಮಾಡಲಾಗುವುದು ಎಂದು ಹೇಳಿದ್ದಾರೆ.

ಮುಂದುವರಿದು, ರಾಜ್ಯದ ಜಿಡಿಪಿಯನ್ನು ₹ 42 ಲಕ್ಷ ಕೋಟಿಗೆ ಏರಿಸಲು ಸರ್ಕಾರ ತೀರ್ಮಾನಿಸಿದೆ. ಜನ ಸಾಮಾನ್ಯರ ಮೇಲೆ ಯಾವುದೇ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.