ADVERTISEMENT

ಫೇಸ್‌ಬುಕ್‌ನಲ್ಲಿ ಆರ್‌ಎಸ್‌ಎಸ್‌ ಟೀಕೆ: ಉದ್ಯಮಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 13:40 IST
Last Updated 19 ಆಗಸ್ಟ್ 2023, 13:40 IST
ಫೇಸ್‌ಬುಕ್‌
ಫೇಸ್‌ಬುಕ್‌   

ಅಹಮದಾಬಾದ್‌: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಟೀಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ರಾಜ್‌ಕೋಟ್ ಜಿಲ್ಲೆಯ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ನ ಮುಖ್ಯಸ್ಥರಾದ ವಿನೋದ್ ಘೇರವ್ಡಾ ಅವರನ್ನು ಗುಜರಾತ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇವರು ಉಪ್ಲೇಟಾದಲ್ಲಿ ‘ಕ್ಯಾಪ್ಟನ್’ ಎಂಬ ಟೇಲರಿಂಗ್ ಅಂಗಡಿ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನ ಸ್ಥಳೀಯ ಕಾರ್ಯಕರ್ತರೊಬ್ಬರು ಕೆಲವು ದಿನಗಳ ಹಿಂದೆ ಇವರ ಮೇಲೆ ದೂರು ನೀಡಿದ್ದರು. ರಾಜ್‌ಕೋಟ್ ಜಿಲ್ಲೆಯ ಉಪ್ಲೇಟಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಫೇಸ್‌ಬುಕ್‌ನಲ್ಲಿ ‘ಧೈರ್ಯವಂತರು ಯುದ್ಧಕ್ಕೆ ಹೋದರು, ಹೇಡಿಗಳು ಸಂಘಕ್ಕೆ ಹೋದರು’ ಎಂದು ಪೋಸ್ಟ್‌ ಮಾಡಿದ್ದಾರೆ. ಇದರ ಜತೆಗೆ ಸಂಘದ ಸಂಸ್ಥಾಪಕ ಡಾ.ಕೇಶವ್ ಹೆಡ್ಗೆವಾರ್ ಅವರ ಪ್ರತಿಷ್ಠೆಗೆ ಹಾನಿಯಾಗುವ ಮತ್ತು ಹಿಂದೂ ಧರ್ಮದ ಸಂಕೇತ ಕೇಸರಿ ಧ್ವಜವನ್ನು ಗೌರವಿಸುವವರ ಭಾವನೆಗಳಿಗೆ ಘಾಸಿ ಮಾಡುವಂತಹ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.