ADVERTISEMENT

'ಮುಗ್ಧ'ರನ್ನು ಸಿಲುಕಿಸುವ ಯತ್ನ: ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಬಂಧನ

ಪಿಟಿಐ
Published 13 ಜುಲೈ 2022, 5:31 IST
Last Updated 13 ಜುಲೈ 2022, 5:31 IST
ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌
ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌   

ಅಹಮದಾಬಾದ್: 2002ರ ಗೋಧ್ರೋತ್ತರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 'ಮುಗ್ಧ' ಜನರನ್ನು ಸಿಲುಕಿಸಲು ಯತ್ನಿಸಿದ ಆರೋಪ ಹೊತ್ತಿರುವ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿದೆ.

ಸಂಜೀವ್‌ ಭಟ್‌ ಅವರು ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿಯಿಂದ ಬಂಧನಕ್ಕೆ ಒಳಪಟ್ಟ ಮೂರನೇ ಆರೋಪಿ. ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲವಾಡ್‌ ಮತ್ತು ಗುಜರಾತ್‌ನ ಮಾಜಿ ಡಿಜಿಪಿ ಆರ್‌.ಬಿ.ಶ್ರೀಕುಮಾರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.

ಪಲನ್‌ಪುರ್‌ ಜೈಲಿನಲ್ಲಿದ್ದ ಸಂಜೀವ್‌ ಭಟ್‌ ಅವರನ್ನು ವರ್ಗಾವಣೆ ವಾರಂಟ್‌ ಮೂಲಕ ವಶಕ್ಕೆ ಪಡೆಯಲಾಗಿದೆ. ಮಂಗಳವಾರ ಸಂಜೆ ನಿಯಮದಂತೆ ಬಂಧಿಸಲಾಗಿದೆ ಎಂದು ಅಹಮದಾಬಾದ್‌ ಕ್ರೈಂ ಬ್ರಾಂಚ್‌ನ ಡಿಜಿಪಿ ಚೈತನ್ಯ ಮಾಂಡಲಿಕ್‌ ತಿಳಿಸಿದ್ದಾರೆ.

ADVERTISEMENT

1996ರಲ್ಲಿ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯಲ್ಲಿ ಮಾದಕ ವಸ್ತು ಹೊಂದಿದ ಸುಳ್ಳು ಆರೋಪದ ಮೇಲೆ ವಕೀಲರೊಬ್ಬರನ್ನು ಬಂಧಿಸಿದ ಪ್ರಕರಣ ಸಂಬಂಧಿಸಿ ಸಂಜೀವ್‌ ಭಟ್‌ 2018ರಿಂದ ಪಲನ್‌ಪುರ್‌ ಜೈಲಿನಲ್ಲಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಸಂಜೀವ್‌ ಭಟ್‌ ಬನಾಸಕಾಂಠಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು. ಇದಕ್ಕೂ ಮೊದಲು 1990ರಲ್ಲಿ ಕಸ್ಟಡಿಯಲ್ಲಿದ್ದ ವ್ಯಕ್ತಿಯ ಸಾವಿನ ಪ್ರಕರಣ ಸಂಬಂಧ ಇವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

2002ರ ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ ಮುಗ್ಧ ಜನರನ್ನು ಸಿಲುಕಿಸುವ ಯತ್ನದ ಪ್ರಕರಣದಲ್ಲಿ ತೀಸ್ತಾ, ಶ್ರೀಕುಮಾರ್‌ ಮತ್ತು ಸಂಜೀವ್‌ ಭಟ್‌ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಗುಜರಾತ್‌ ಸರ್ಕಾರ ಕಳೆದ ತಿಂಗಳು ಎಸ್‌ಐಟಿಯನ್ನು ನೇಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.