ADVERTISEMENT

ಸಚಿವರ ಪುತ್ರನ ವಿರುದ್ಧ ಕ್ರಮಕೈಗೊಂಡಿದ್ದ ಮಹಿಳಾ ಕಾನ್‌ಸ್ಟೆಬಲ್‌ ರಾಜೀನಾಮೆ

ರಾಜೀನಾಮೆ ನೀಡಿಲ್ಲ: ಸೂರತ್‌ ಪೊಲೀಸ್‌ ಆಯುಕ್ತರ ಸ್ಪಷ್ಟನೆ

ಪಿಟಿಐ
Published 16 ಜುಲೈ 2020, 8:03 IST
Last Updated 16 ಜುಲೈ 2020, 8:03 IST
ಸುನೀತಾ ಯಾದವ್‌
ಸುನೀತಾ ಯಾದವ್‌   

ಸೂರತ್‌: ಲಾಕ್‌ಡೌನ್‌ ನಿಯಮಾವಳಿಗಳನ್ನು ಉಲ್ಲಂಘಿಸಿದ್ದ ಗುಜರಾತ್‌ನ ಸಚಿವರೊಬ್ಬರ ಪುತ್ರನ ವಿರುದ್ಧ ಕ್ರಮಕೈಗೊಂಡು ಗಮನಸೆಳೆದಿದ್ದ ಮಹಿಳಾ ಕಾನ್‌ಸ್ಟೆಬಲ್‌ ಸುನೀತಾ ಯಾದವ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಕೋವಿಡ್‌–19 ಹಾಟ್‌ಸ್ಪಾಟ್‌ ಆಗಿರುವ ಸೂರತ್‌ನಲ್ಲಿ ವಿಧಿಸಿದ್ದ ರಾತ್ರಿ ಕರ್ಫ್ಯೂ ಮತ್ತು ಲಾಕ್‌ಡೌನ್‌ ನಿಯಮಾವಳಿಗಳನ್ನು ಗುಜರಾತ್‌ನ ಆರೋಗ್ಯ ಖಾತೆ ರಾಜ್ಯ ಸಚಿವ ಕುಮಾರ್‌ ಕಣಾನಿ ಅವರ ಪುತ್ರ ಪ್ರಕಾಶ್‌ ಕಣಾನಿ ಮತ್ತು ಅವರ ಇಬ್ಬರು ಸ್ನೇಹಿತರು ಉಲ್ಲಂಘಿಸಿದ್ದನ್ನು ಸುನೀತಾ ಪ್ರಶ್ನಿಸಿದ್ದರು. ಈ ವೇಳೆ ನಡೆದಿದ್ದ ಬಿರುಸಿನ ಮಾತಿನ ಚಕಮಕಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸುನೀತಾ ಕೈಗೊಂಡ ಕ್ರಮದಿಂದಾಗಿ ಎಫ್‌ಐಆರ್ ದಾಖಲಿಸಿ ಮೂವರನ್ನು ಭಾನುವಾರ ಬಂಧಿಸಲಾಗಿತ್ತು. ನಂತರ, ಜಾಮೀನಿನ ಮೇಲೆ ಮೂವರನ್ನು ಬಿಡುಗಡೆ ಮಾಡಲಾಗಿದೆ.

ಸಚಿವರ ಪುತ್ರನ ವಿರುದ್ಧ ಕ್ರಮಕೈಗೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುನೀತಾ ಯಾದವ್‌ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲವರು ಇವರನ್ನು ‘ಲೇಡಿ ಸಿಂಗಂ’ ಎಂದು ಕರೆದಿದ್ದರು. ಇನ್ನು ಕೆಲವರು 2022 ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು.

ADVERTISEMENT

‘ಹಿರಿಯ ಅಧಿಕಾರಿಗಳು ನನಗೆ ಬೆಂಬಲ ನೀಡಲಿಲ್ಲ. ಹೀಗಾಗಿ, ಕಾನ್‌ಸ್ಟೆಬಲ್‌ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ. ತಾವು ಅತಿ ಗಣ್ಯ ವ್ಯಕ್ತಿಗಳೆಂದು ಸಚಿವರ ಪುತ್ರರು ಭಾವಿಸುತ್ತಾರೆ. ಇದು ನಮ್ಮ ವ್ಯವಸ್ಥೆಯಲ್ಲಿನ ದೋಷ’ ಎಂದು ಸುನೀತಾ ತಿಳಿಸಿದ್ದಾರೆ.

ಆದರೆ, ಸುನೀತಾ ರಾಜೀನಾಮೆ ನೀಡಿರುವುದನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

‘ಸುನೀತಾ ರಾಜೀನಾಮೆ ನೀಡಿಲ್ಲ. ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಹಂತದಲ್ಲಿ ತಾಂತ್ರಿಕವಾಗಿ ರಾಜೀನಾಮೆ ನೀಡಲು ಅವಕಾಶ ಇಲ್ಲ’ ಎಂದು ಸೂರತ್‌ ಪೊಲೀಸ್‌ ಆಯುಕ್ತ ಆರ್‌.ಬಿ. ಬ್ರಹ್ಮಭಟ್ಟ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.