ADVERTISEMENT

ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ: ಕ್ರಮಕ್ಕೆ ಗಂಭೀರ್‌ ಆಗ್ರಹ

ಬಿಜೆಪಿಯ ಕೆಲವು ನಾಯಕರ ಅಸಮಾಧಾನ

ಪಿಟಿಐ
Published 27 ಮೇ 2019, 20:00 IST
Last Updated 27 ಮೇ 2019, 20:00 IST
ಗೌತಮ್‌ ಗಂಭೀರ್‌
ಗೌತಮ್‌ ಗಂಭೀರ್‌   

ನವದೆಹಲಿ: ಗುರುಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದನ್ನು ವಿಷಾದನೀಯ ಎಂದು ಹೇಳಿರುವ ದೆಹಲಿ ಪೂರ್ವ ಕ್ಷೇತ್ರದ ಬಿಜೆಪಿ ಸಂಸದ ಗೌತಮ್‌ ಗಂಭೀರ್‌, ಈ ಪ್ರಕರಣದ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ವಿರೋಧ ಪಕ್ಷಗಳು ನೀಡುವ ಹೇಳಿಕೆಯಂತೆ ಗಂಭೀರ್‌ ಹೇಳಿದ್ದಾರೆ ಎಂದು ಬಿಜೆಪಿಯ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್‌ ಬಕರ್‌ ಆಲಂ (25) ಎಂಬಾತನ ಮೇಲೆ ಮೇ 25 ರಂದು ಹಲ್ಲೆ ನಡೆಸಲಾಗಿತ್ತು. ತಲೆಗೆ ಹಾಕಿಕೊಂಡಿದ್ದ ಮುಸ್ಲಿಂರ ಸಾಂಪ್ರದಾಯಿಕ ಟೋಪಿ ತೆಗೆದು ಜೈ ಶ್ರೀರಾಂ ಎಂದು ಘೋಷಣೆ ಕೂಗುವಂತೆ ಆಲಂ ಅವರನ್ನು ಅಪರಿಚಿತ ನಾಲ್ವರು ಒತ್ತಾಯಿಸಿದ್ದಾರೆ. ಇದನ್ನು ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ADVERTISEMENT

‘ಗಂಭೀರ್‌ ಅವರು ಈಗ ಕ್ರಿಕೆಟ್‌ ಆಟಗಾರರಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ರಾಜಕೀಯ ದೃಷ್ಟಿಕೋನದಿಂದ ಹೇಳಿಕೆ ನೀಡಬೇಕು. ಇಂಥ ಘಟನೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ, ಹರಿಯಾಣದಲ್ಲಿ ನಡೆದಿರುವ ಈ ಘಟನೆ ಬಗ್ಗೆ ಹೇಳಿಕೆ ನೀಡುವುದರಿಂದ ಪ್ರಯೋಜನವೇನಿದೆ. ವಿರೋಧಪಕ್ಷಗಳು ಬಿಜೆಪಿ ವಿರುದ್ಧ ಇಂಥ ಹೇಳಿಕೆಗಳನ್ನು ಬಳಸಿಕೊಳ್ಳಬಹುದು’ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ಮಂತ್ರದಿಂದ ಜಾತ್ಯತೀತೆಯ ಬಗ್ಗೆ ನನ್ನ ಆಲೋಚನೆಗಳು ಹೊರಹೊಮ್ಮಿವೆ. ಗುರುಗ್ರಾಮ ಘಟನೆಗೆ ಮಾತ್ರ ಇದು ಸೀಮಿತವಲ್ಲ. ಜಾತಿ, ಧರ್ಮದ ಆಧಾರದ ಮೇಲೆ ಯಾವುದೇ ದಬ್ಬಾಳಿಕೆ ನಡೆದರೂ ವಿಷಾದನೀಯ. ಸಹಿಷ್ಣುತೆ ಮತ್ತು ಅಂತರ್ಗತ ಬೆಳವಣಿಗೆ ಭಾರತದ ಕಲ್ಪನೆಯನ್ನು ಆಧರಿಸಿದೆ’ ಎಂದು ಗಂಭೀರ್‌ ಮತ್ತೊಂದು ಟ್ವೀಟ್‌ನಲ್ಲಿ ತಮ್ಮ ಹೇಳಿಕೆಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.