ಗುರುಗ್ರಾಮ: ಇಲ್ಲಿನ ಮೆದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗಗನಸಖಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪ್ರಕರಣ ಸಂಬಂಧ, ಸಾದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಪತ್ತೆಗಾಗಿ, ಆಸ್ಪತ್ರೆಯ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಹಾಗೂ ಸಿಬ್ಬಂದಿಯ ಕರ್ತವ್ಯ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಗುರುಗ್ರಾಮ ಪೊಲೀಸ್ ವಕ್ತಾರ ಸಂದೀಪ್ ಕುಮಾರ್ ತಿಳಿಸಿದ್ದಾರೆ.
‘ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯಿಂದಲೇ ಲೈಂಗಿಕ ದೌರ್ಜನ್ಯ ನಡೆದಿರುವುದು ಈವರೆಗೆ ರುಜುವಾತಾಗಿಲ್ಲ. ಪ್ರಕರಣದ ವಿಚಾರಣೆ ಸಂಬಂಧ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ’ ಎಂದು ಮೆದಾಂತ ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರುದಾರ ಮಹಿಳೆಯು ತರಬೇತಿ ಸಲುವಾಗಿ ಗುರುಗ್ರಾಮಕ್ಕೆ ಬಂದಿದ್ದು, ತಾವು ತಂಗಿದ್ದ ಹೋಟೆಲ್‌ನ ಕೊಳದಲ್ಲಿ ಈಜುವಾಗ ನೀರಿನಲ್ಲಿ ಮುಳುಗಿದ್ದರಿಂದ ಚಿಕಿತ್ಸೆಗೆಂದು ಹತ್ತಿರದ ಮೆದಾಂತ ಆಸ್ಪತ್ರೆಗೆ ದಾಖಲಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
‘ಏ. 6ರಂದು ಈ ಘಟನೆ ನಡೆದಿದ್ದು, ಆ ವೇಳೆ ನಾನು ವೆಂಟಿಲೇಟರ್‌ನಲ್ಲಿದ್ದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ನನ್ನ ಮೇಲೆ ವೈದ್ಯಕೀಯ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದರು. ಆ ವೇಳೆ ಇಬ್ಬರು ದಾದಿಯರು ಸ್ಥಳದಲ್ಲೇ ಇದ್ದರೂ, ನನ್ನ ಸಹಾಯಕ್ಕೆ ಬರಲಿಲ್ಲ’ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.