ADVERTISEMENT

ಜ್ಞಾನೇಶ್ ಕುಮಾರ್ ಹೊಸ ಮುಖ್ಯ ಚುನಾವಣಾ ಆಯುಕ್ತ

ಪಿಟಿಐ
Published 18 ಫೆಬ್ರುವರಿ 2025, 1:18 IST
Last Updated 18 ಫೆಬ್ರುವರಿ 2025, 1:18 IST
ಜ್ಞಾನೇಶ್ ಕುಮಾರ್
ಜ್ಞಾನೇಶ್ ಕುಮಾರ್   

ನವದೆಹಲಿ: ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿ.ಇ.ಸಿ) ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ.

ಕುಮಾರ್ ಅವರು 1988ನೆಯ ಬ್ಯಾಚ್‌ನ ಕೇರಳ ಕೇಡರ್‌ನ ಐಎಎಸ್‌ ಅಧಿಕಾರಿ.

ಕುಮಾರ್‌ ಅವರು ಚುನಾವಣಾ ಆಯೋಗದ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ಹೊಸ ಕಾಯ್ದೆಗೆ ಅನುಗುಣವಾಗಿ ನೇಮಕ ಆಗಿರುವ ಮೊದಲ ಸಿ.ಇ.ಸಿ.

ADVERTISEMENT

ಕುಮಾರ್ ಅವರ ಅಧಿಕಾರ ಅವಧಿಯು 2029ರ ಜನವರಿ 26ರವರೆಗೆ ಇರಲಿದೆ. 2029ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಆಯೋಗವು ಈ ದಿನಾಂಕಕ್ಕೆ ಕೆಲವು ದಿನ ಮೊದಲು ಘೋಷಿಸುವ ಸಾಧ್ಯತೆ ಇದೆ.

1989ರ ಹರಿಯಾಣ ಕೇಡರ್‌ನ ಐಎಎಸ್ ಅಧಿಕಾರಿ ವಿವೇಕ್ ಜೋಷಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ (ಇ.ಸಿ) ನೇಮಿಸಲಾಗಿದೆ.

26ನೆಯ ಸಿ.ಇ.ಸಿ ಆಗಿರುವ ಕುಮಾರ್ ಅವರು ಈ ವರ್ಷ ಬಿಹಾರ ವಿಧಾನಸಭಾ ಚುನಾವಣೆ, ಮುಂದಿನ ವರ್ಷ ಕೇರಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. 2026ರಲ್ಲಿಯೇ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಕೂಡ ನಡೆಯಲಿವೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸುವ ತೀರ್ಮಾನವನ್ನು ಅನುಷ್ಠಾನಕ್ಕೆ ತರುವಲ್ಲಿ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇವರನ್ನು 2024ರ ಮಾರ್ಚ್‌ 15ರಂದು ಚುನಾವಣಾ ಆಯುಕ್ತರನ್ನಾಗಿ (ಇ.ಸಿ) ನೇಮಿಸಲಾಗಿತ್ತು.

ಸಿ.ಇ.ಸಿ ನೇಮಕಕ್ಕೆ ಸಂಬಂಧಿಸಿದ ಆಯ್ಕೆ ಸಮಿತಿಯ ಸ್ವರೂಪವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಹೊಸ ಸಿ.ಇ.ಸಿ ನೇಮಕವನ್ನು ಮುಂದೂಡಬೇಕು ಎಂದು ಕಾಂಗ್ರೆಸ್ ಮನವಿ ಮಾಡಿದ ಕೆಲವೇ ಗಂಟೆಗಳ ನಂತರ ಈ ನೇಮಕ ಆಗಿದೆ.

ಕಾಂಗ್ರೆಸ್ ಪಕ್ಷದ ಈ ಬೇಡಿಕೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಯ್ಕೆ ಸಮಿತಿಯ ಸಭೆಯಲ್ಲಿ ಮಂಡಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಮಿತಿಯ ಸಭೆ ನಡೆಯಿತು. ಪ್ರಧಾನಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಹುಲ್ ಅವರು ಈ ಸಮಿತಿಯ ಸದಸ್ಯರು.

ಕುಮಾರ್ ಅವರು ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಕೇರಳ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಯಾಗಿಯೂ ಅವರು ಕೆಲಸ ನಿರ್ವಹಿಸಿದ್ದಾರೆ.

ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ, ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಕಾರ್ಯದರ್ಶಿಯಾಗಿ, ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ, ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.