ADVERTISEMENT

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ -ರಾಹುಲ್ ಗಾಂಧಿ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ

ಪಿಟಿಐ
Published 10 ಮೇ 2021, 5:12 IST
Last Updated 10 ಮೇ 2021, 5:12 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ‘ಕೋವಿಡ್‌ ನಿರ್ವಹಣೆ ವಿಷಯದಲ್ಲಿ ಸರ್ಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದರೆ, ಇಂದು ಕೋವಿಡ್ ಬಿಕ್ಕಟ್ಟು ನಿಯಂತ್ರಣಕ್ಕಾಗಿ ಪದೇ ಪದೇ ಎದೆ ಬಡಿದುಕೊಂಡು ವಿದೇಶಗಳಿಂದ ನೆರವು ಪಡೆಯುವ ಪರಿಸ್ಥಿತಿ ಬರುತ್ತಿರಲಿಲ್ಲ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

‘ಕೇಂದ್ರ ಸರ್ಕಾರ ಈಗ ಎದೆ ಬಡಿದುಕೊಂಡು ವಿದೇಶಗಳಿಂದ ಪರಿಹಾರ ಸಾಮಗ್ರಿಗಳನ್ನು ಪಡೆದುಕೊಳ್ಳುತ್ತಿರುವುದನ್ನು ನೋಡಿದರೆ, ಪರಿಸ್ಥಿತಿ ಬಹಳ ಕರುಣಾಜನಕವಾಗಿದೆ ಎನ್ನಿಸುತ್ತಿದೆ’ ಎಂದು ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ನಿರ್ವಹಣೆ ಸಂಬಂಧ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಭಾರತ, ವಿದೇಶಗಳಿಂದ ಪಡೆದ ಎಲ್ಲ ಪರಿಹಾರ ಸಾಮಗ್ರಿಗಳ ಬಗ್ಗೆ ಸಾರ್ವನಿಕವಾಗಿ ಮಾಹಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಳೆದ ವಾರ ಕಾಂಗ್ರೆಸ್‌ ಒತ್ತಾಯಿಸಿತ್ತು.

ADVERTISEMENT

ಕೊರೊನಾ ಎರಡನೇ ಅಲೆ ಆರಂಭವಾದ ಮೇಲೆ, ವಿದೇಶಗಳಿಂದ ಬಹುದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಪರಿಕರಗಳನ್ನು ಭಾರತ ಸ್ವೀಕರಿಸಿದೆ. ಅಮೆರಿಕ, ರಷ್ಯಾ, ಫ್ರಾನ್ಸ್‌, ಜರ್ಮನಿ, ಬ್ರಿಟನ್‌, ಐರ್ಲೆಂಡ್‌, ಬೆಲ್ಜಿಯಂ, ರೊಮಾನಿಯಾ, ಸಿಂಗಪುರ, ಸ್ವೀಡನ್‌ ಮತ್ತು ಕುವೈತ್ ಸೇರಿದಂತೆ ಹಲವು ದೇಶಗಳು ಭಾರತಕ್ಕೆ ನೆರವು ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.