ADVERTISEMENT

ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿ ಮನೆಗೆ ನುಗ್ಗಲು ಶಿವಸೇನಾ ಯತ್ನ

ಪಿಟಿಐ
Published 23 ಏಪ್ರಿಲ್ 2022, 13:20 IST
Last Updated 23 ಏಪ್ರಿಲ್ 2022, 13:20 IST
ಶಾಸಕ ರವಿ ರಾಣಾ ವಿರುದ್ಧ ಶಿವಸೇನಾ ಕಾರ್ಯಕರ್ತರ ಪ್ರತಿಭಟನೆ: ಪಿಟಿಐ ಚಿತ್ರ
ಶಾಸಕ ರವಿ ರಾಣಾ ವಿರುದ್ಧ ಶಿವಸೇನಾ ಕಾರ್ಯಕರ್ತರ ಪ್ರತಿಭಟನೆ: ಪಿಟಿಐ ಚಿತ್ರ   

ಮುಂಬೈ: ಶಿವಸೇನೆ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಮಹಾರಾಷ್ಟ್ರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದಾರೆ.

ಆದರೆ, ತಕ್ಷಣವೇ ಎಚ್ಚೆತ್ತ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು ಮತ್ತು ಶಿವಸೇನೆ ಕಾರ್ಯಕರ್ತರನ್ನು ತಡೆದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 9 ಗಂಟೆಗೆ ಉಪನಗರ ಬಾಂದ್ರಾದಲ್ಲಿರುವ ಶಿವಸೇನಾ ಅಧ್ಯಕ್ಷ, ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ರಾಣಾ ದಂಪತಿ ಶುಕ್ರವಾರ ಹೇಳಿದ್ದರು.

ADVERTISEMENT

ರಾಣಾ ದಂಪತಿಯ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಿವಸೇನೆ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆಯಿಂದಲೇ ‘ಮಾತೋಶ್ರೀ’ ಬಳಿ ಜಮಾಯಿಸಿದ್ದರು. ಮತ್ತೊಂದು ಗುಂಪು ರಾಣಾ ದಂಪತಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿತ್ತು

‘ಉದ್ರಿಕ್ತಗೊಂಡ ಶಿವಸೇನೆ ಕಾರ್ಯಕರ್ತರು ಬೆಳಿಗ್ಗೆ 8.45ರ ಸುಮಾರಿಗೆ ರಾಣಾ ದಂಪತಿಯ ಅಪಾರ್ಟ್‌ಮೆಂಟ್‌ನಿಂದ ಸುಮಾರು 50 ಮೀಟರ್ ದೂರದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಿದರು. ಅಲ್ಲದೆ ಘೋಷಣೆಗಳನ್ನು ಕೂಗುತ್ತಾ ಅಪಾರ್ಟ್‌ಮೆಂಟ್ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆದರೆ, ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಅವರು ಹೇಳಿದರು.

ಈ ನಡುವೆ, ಸಿಎಂ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಣಕ್ಕೆ ಮುಂದಾದರೆ ರಾಣಾ ದಂಪತಿಗೆ ಪ್ರಸಾದ ಕೊಡದೇ ಕಳುಹಿಸುವುದಿಲ್ಲ ಎಂದು ಶಿವಸೇನೆ ಕಾರ್ಯಕರ್ತರು ಮತ್ತು ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.