ADVERTISEMENT

ಹರೇನ್‌ ಪಾಂಡ್ಯ ಹತ್ಯೆ: 12 ಮಂದಿ ದೋಷಿಗಳೆಂದ ಸುಪ್ರೀಂ

ಪಿಟಿಐ
Published 5 ಜುಲೈ 2019, 20:00 IST
Last Updated 5 ಜುಲೈ 2019, 20:00 IST
   

ನವದೆಹಲಿ:ಗುಜರಾತ್‌ನ ಮಾಜಿ ಸಚಿವ ಹರೇನ್‌ ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಹನ್ನೆರಡು ಮಂದಿ ದೋಷಿಗಳು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಗುಜರಾತ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ರದ್ದುಗೊಳಿಸಿದೆ.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದವಿಚಾರಣಾಧೀನ ನ್ಯಾಯಾಲಯ ಪಿಒಟಿಎ (ಭಯೋತ್ಪಾದಕ ಚಟುವಟಿಕೆಗಳ ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಹೈಕೋರ್ಟ್‌, ಕೆಳ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸಿತ್ತು.ಹೈಕೋರ್ಟ್‌ ತೀರ್ಪಿನವಿರುದ್ಧ ಸಿಬಿಐ ಮತ್ತು ಗುಜರಾತ್‌ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್‌ ವಿಶ್ರಾ ಮತ್ತು ವಿನೀತ್‌ ಸರನ್ ಅವರನ್ನೊಳಗೊಂಡ ಪೀಠ, ಕೊಲೆ ಪ್ರಕರಣದ ಮರು ತನಿಖೆಗೆ ಕೋರಿ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ, ₹50 ಸಾವಿರ ದಂಡ ವಿಧಿಸಿದೆ.

ಈ ಪ್ರಕರಣದಲ್ಲಿ ಇನ್ನೊಮ್ಮೆ ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ.

ಇದೇ ವೇಳೆ ತನಿಖೆಯಲ್ಲಿ ಗೊಂದಲ ಉಂಟುಮಾಡಿದ ಕಾರಣಕ್ಕೆ ಸಿಬಿಐಯನ್ನು ಸುಪ್ರೀಂ ಕೋರ್ಟ್‌ ತರಾಟೆ ತೆಗೆದುಕೊಂಡಿದೆ.

ನರೇಂದ್ರ ಮೋದಿ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಹರೇನ್ ಪಾಂಡ್ಯ ಅವರನ್ನು ಅಹಮದಾಬಾದ್‌ನ ಲಾ ಗಾರ್ಡನ್ ಪ್ರದೇಶದಲ್ಲಿ 2003ರ ಮಾರ್ಚ್‌ 26ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.2002ರಲ್ಲಿ ಗುಜರಾತಿನಲ್ಲಿ ನಡೆದಿದ್ದ ಕೋಮು ಗಲಭೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಸಿಬಿಐ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.