ADVERTISEMENT

ನದಿ ಪ್ರವಾಹದಿಂದ ಗ್ರಾಮ ಜಲಾವೃತ: ಹರಿಯಾಣ ಶಾಸಕರ ಕೆನ್ನೆಗೆ ಬಾರಿಸಿದ ಉದ್ರಿಕ್ತ ಮಹಿಳೆ

ಪಿಟಿಐ
Published 13 ಜುಲೈ 2023, 4:27 IST
Last Updated 13 ಜುಲೈ 2023, 4:27 IST
ಶಾಸಕರ ಕೆನ್ನೆಗೆ ಬಾರಿಸಿದ ಮಹಿಳೆ
ಶಾಸಕರ ಕೆನ್ನೆಗೆ ಬಾರಿಸಿದ ಮಹಿಳೆ   ಚಿತ್ರಕೃಪೆ: ಟ್ವಿಟರ್‌

ಕೈಥಾಲ್‌ (ಹರಿಯಾಣ): ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ ಜನನಾಯಕ್‌ ಜನತಾ ಪಕ್ಷದ (ಜೆಜೆಪಿ) ಶಾಸಕ ಈಶ್ವರ್‌ ಸಿಂಗ್‌ ಅವರಿಗೆ ಉದ್ರಿಕ್ತ ಮಹಿಳೆಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಗುಹ್ಲಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಜೆಜೆಪಿಯು, ಹರಿಯಾಣದಲ್ಲಿ ಅಧಿಕಾರದಲ್ಲಿರುವ ಜೆಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಭಾಗವಾಗಿದೆ.

ಭಾರಿ ಮಳೆಯಿಂದಾಗಿ ಘಗ್ಗರ್ ನದಿಯು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಭಾಟಿಯಾ ಗ್ರಾಮದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ವೇಳೆ ಪರಿಸ್ಥಿತಿ ವೀಕ್ಷಣೆಗೆ ಬಂದ ಸಿಂಗ್‌ ಅವರ ಮೇಲೆ ಮಹಿಳೆ ಹಲ್ಲೆ ಮಾಡಿದ್ದಾರೆ.

ADVERTISEMENT

ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಂಗ್‌, 'ಪರಿಸ್ಥಿತಿ ಅವಲೋಕನ ಸಲುವಾಗಿ ಗ್ರಾಮಕ್ಕೆ ಹೋಗಿದ್ದೆ. ಮಹಿಳೆ ಮತ್ತು ಕೆಲವರು ಸಣ್ಣ ಅಣೆಕಟ್ಟೆ ಒಡೆದದ್ದರಿಂದಲೇ ತಮ್ಮ ಗ್ರಾಮ ಜಲಾವೃತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು'

'ನೀವು ಪ್ರಯತ್ನಿಸಿದ್ದರೆ ಅಣೆಕಟ್ಟು ಒಡೆಯುತ್ತಿರಲಿಲ್ಲ ಎಂದು ಮಹಿಳೆ ಹೇಳಿದರು. ಆದರೆ, ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇದು ಪ್ರಾಕೃತಿಕ ವಿಕೋಪವೆಂದು ವಿವರಿಸಿದೆ' ಎಂದು ತಿಳಿಸಿದ್ದಾರೆ.

ಮಹಿಳೆ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿಲ್ಲ ಎಂದಿರುವ ಸಿಂಗ್‌, 'ಮಹಿಳೆ ಮಾಡಿದ ಕೆಲಸದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ನನಗಿಷ್ಟವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಘಗ್ಗರ್ ನದಿ ಪ್ರವಾಹವು ಪಂಜಾಬ್ ಹಾಗೂ ಹರಿಯಾಣದ ಹಲವು ಗ್ರಾಮಗಳಲ್ಲಿ ಜನಜೀವನದ ಮೇಲೆ ಪರಿಣಾಮ ಉಂಟುಮಾಡಿದೆ. ಎರಡೂ ರಾಜ್ಯಗಳಲ್ಲಿ ಪರಿಹಾರ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.