ADVERTISEMENT

ಸೂರ್ಯಕಾಂತಿ ಬೀಜಕ್ಕೆ ಕನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹ: ದೆಹಲಿ–ಚಂಡೀಗಢ ಹೆದ್ದಾರಿ ತಡೆ

ಪಿಟಿಐ
Published 13 ಜೂನ್ 2023, 7:00 IST
Last Updated 13 ಜೂನ್ 2023, 7:00 IST
ಕುರುಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ವಾಹನ ಸಂಚಾರಕ್ಕೆ ಸೋಮವಾರ ತಡೆಯೊಡ್ಡಿದರು –ಪಿಟಿಐ ಚಿತ್ರ
ಕುರುಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ವಾಹನ ಸಂಚಾರಕ್ಕೆ ಸೋಮವಾರ ತಡೆಯೊಡ್ಡಿದರು –ಪಿಟಿಐ ಚಿತ್ರ   

ಕುರುಕ್ಷೇತ್ರ: ಸೂರ್ಯಕಾಂತಿ ಬೀಜಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಇಲ್ಲಿನ ಪಿಪ್ಲಿಯ ಧಾನ್ಯ ಮಾರುಕಟ್ಟೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾಪಂಚಾಯತ್‌ ಬಳಿಕ ರೈತರು ದೆಹಲಿ– ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.

ರೈತರು ಪ್ರತಿಭಟನೆ ನಡೆಸಿದ ಕಾರಣ ಪೊಲೀಸರು ಬೇರೆ ರಸ್ತೆಗಳ ಮೂಲಕ ವಾಹನಗಳನ್ನು ಕಳುಹಿಸಿದರು ಎಂದೂ ಹೇಳಿವೆ.

‘ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಮನೋಹರ್ ಲಾಲ್‌ ಕಟ್ಟರ್‌ ಅವರ ಜೊತೆ ಚರ್ಚಿಸಲು ಸಭೆ ಏರ್ಪಡಿಸುವುದಾಗಿ ಸ್ಥಳೀಯಾಡಳಿತ ಹೇಳಿತ್ತು. ಆದರೆ, ಸಭೆ ಏರ್ಪಡಿಸದ ಕಾರಣ ರಸ್ತೆ ತಡೆ ನಡೆಸುತ್ತಿದ್ದೇವೆ’ ಎಂದು ರೈತ ಮುಖಂಡ ಕರಂ ಸಿಂಗ್‌ ಮಥಾನ ಹೇಳಿದರು.

ADVERTISEMENT

ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌, ಕುಸ್ತಿಪಟು ಬಜರಂಗ್‌ ಪೂನಿಯಾ, ವಿವಿಧ ಖಾಪ್‌ಗಳ ಮುಖಂಡರು ಪಾಲ್ಗೊಂಡಿದ್ದರು. ಭಾರತೀಯ ಕಿಸಾನ್‌ ಯೂನಿಯನ್‌ (ಚಾರುಣಿ) ಮಹಾಪಂಚಾಯತ್‌ಗೆ ಕರೆ ನೀಡಿತ್ತು.

1.48 ಲಕ್ಷ ರೈತರ ವಿರುದ್ಧ ಇನ್ನೂ ಇವೆ ಪ್ರಕರಣಗಳು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ 1.48 ಲಕ್ಷ ರೈತರ ವಿರುದ್ಧದ ಪ್ರಕರಣಗಳನ್ನು ಇನ್ನೂ ವಾಪಸ್‌ ಪಡೆದಿಲ್ಲ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಮುಖಂಡ ಶಿವಕುಮಾರ್‌ ಶರ್ಮಾ ಸೋಮವಾರ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ಪ್ರತಿಭಟನೆಯು ಕೊನೆಗೊಂಡ ಬಳಿಕ 30 ದಿನಗಳೊಳಗೆ ಎಲ್ಲಾ ಪ್ರಕರಣಗಳನ್ನು ವಾಪಸ್‌ ಪಡೆಯುವುದಾಗಿ ಕೇಂದ್ರ ಸರ್ಕಾರವು ನಮಗೆ ಭರವಸೆ ನೀಡಿತ್ತು. ಆದರೆ ಪ್ರಕರಣಗಳು ಇನ್ನೂ ಇವೆ. ನಾನೂ ಸೇರಿದಂತೆ ರೈತರು ಈ ಪ್ರಕರಣಗಳಿಂದಾಗಿ ನ್ಯಾಯಾಲಯಕ್ಕೆ ಓಡಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.