ADVERTISEMENT

ಹರಿಯಾಣದ 600 ಆಸ್ಪತ್ರೆಗಳಲ್ಲಿ 'Ayushman Bharat' ಸೇವೆ ಸ್ಥಗಿತ: ಐಎಂಎ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2025, 10:34 IST
Last Updated 27 ಜನವರಿ 2025, 10:34 IST
   

ಚಂಡೀಗಢ: ಹರಿಯಾಣದ 600 ಖಾಸಗಿ ಆಸ್ಪತ್ರೆಗಳು ಫೆಬ್ರುವರಿ 3 ರಿಂದ ಆಯುಷ್ಮಾನ್ ಭಾರತ್‌ ಯೋಜನೆಯಡಿ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ರಾಜ್ಯದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಪ್ರಕಟಿಸಿದೆ.

₹400 ಕೋಟಿ ಮೊತ್ತವನ್ನು ಮರುಪಾವತಿ ಮಾಡಲು ಸರ್ಕಾರ ವಿಫಲವಾದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ರಾಜ್ಯದಲ್ಲಿ (ಹರಿಯಾಣ) ಸುಮಾರು 1,300 ಆಸ್ಪತ್ರೆಗಳು ಆಯುಷ್ಮಾನ್ ಭಾರತ್‌ ಯೋಜನೆಯಡಿ ಕಾರ್ಯನಿರ್ವಹಿಸಲು ನೋಂದಾಯಿಸಿಕೊಂಡಿವೆ. ಇದರಲ್ಲಿ 600 ಖಾಸಗಿ ಆಸ್ಪತ್ರೆಗಳೂ ಸೇರಿವೆ. ಈ ಆಸ್ಪತ್ರೆಗಳಿಗೆ ಹಣ ಮರುಪಾವತಿ ವಿಳಂಬವಾಗಿದೆ. ಆದರೆ ಹೊಸ ಬಿಲ್‌ಗಳು ಹೆಚ್ಚಾಗುತ್ತಲೇ ಇವೆ. ಅಗತ್ಯ ಹಣವಿಲ್ಲದೆ ಆಸ್ಪತ್ರೆಗಳು ಕಾರ್ಯನಿರ್ವಹಿಸುವುದು ಅಸಾಧ್ಯ ಎಂದು ಹರಿಯಾಣದ ಐಎಂಎ ಅಧ್ಯಕ್ಷ ಮಹಾವೀರ್ ಜೈನ್ ಹೇಳಿದ್ದಾರೆ.

ADVERTISEMENT

ಏನಿದು ಆಯುಷ್ಮಾನ್ ಭಾರತ್‌ ಯೋಜನೆ

ದೇಶದ ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ 2018ರಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಆಯುಷ್ಮಾನ್ ಭಾರತ್‌ ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸುತ್ತಿದೆ. ಮೊದಲನೆಯದ್ದು, ಆಯುಷ್ಮಾನ್ ಆರೋಗ್ಯ ಮಂದಿರ. ಎರಡನೆಯದ್ದು, ಆಯುಷ್ಮಾನ್ ಭಾರತ್‌ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ–ಪಿಎಂಜೆಎವೈ).

ಈ ಯೋಜನೆಯ ಅಡಿ ಬಡ ಕುಟುಂಬಗಳಿಗೆ ವರ್ಷಕ್ಕೆ ₹5 ಲಕ್ಷದವರೆಗೆ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಅಂದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರದ ಚಿಕಿತ್ಸೆಗಳನ್ನು ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದಾಗಿತ್ತು.

ವಿಸ್ತೃತ ರೂಪ ಪಡೆದ ಆಯುಷ್ಮಾನ್

ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಯೋಜನೆಯನ್ನು ಇತ್ತೀಚೆಗೆ ವಿಸ್ತರಿಸಲಾಗಿತ್ಡು. 70 ಮತ್ತು ಅದಕ್ಕಿಂತ ಹೆಚ್ಚು ವರ್ಷ ವಯಸ್ಸಿನ ಎಲ್ಲ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆಯನ್ನು ಒದಗಿಸಲಿದೆ.

ಪರಿಷ್ಕೃತ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ₹5 ಲಕ್ಷದವರೆಗಿನ ವಿಮಾ ಸೌಲಭ್ಯ ಹಾಗೆಯೇ ಇರಲಿದೆ. ಹೆಚ್ಚುವರಿಯಾಗಿ ಆದಾಯದ ಇತಿ ಮಿತಿಗಳಿಲ್ಲದೆ, 70 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರಿಗೂ ವಾರ್ಷಿಕ ₹5 ಲಕ್ಷದವರೆಗೆ ವಿಮಾ ಸೌಲಭ್ಯ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.