ADVERTISEMENT

ದ್ವೇಷ ಭಾಷಣ: ಯಾವುದೇ ಸಮುದಾಯದ ವಿರುದ್ಧ ನಿರ್ದಿಷ್ಟ ಪದ ಬಳಸಿಲ್ಲ –ದೆಹಲಿ ಪೊಲೀಸ್

ಪಿಟಿಐ
Published 14 ಏಪ್ರಿಲ್ 2022, 13:44 IST
Last Updated 14 ಏಪ್ರಿಲ್ 2022, 13:44 IST
   

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಾವುದೇ ಸಮುದಾಯದ ವಿರುದ್ಧದ್ವೇಷ ಹುಟ್ಟಿಸುವ ನಿರ್ದಿಷ್ಟ ಪದಗಳನ್ನು ಹೇಳಲಾಗಿಲ್ಲ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ದೆಹಲಿ ಹಾಗೂ ಹರಿದ್ವಾರಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ದ್ವೇಷ ಭಾಷಣ ಮಾಡಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಿ ಮತ್ತು ಕ್ರಮವನ್ನು ತೆಗೆದುಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ.

‘ದ್ವೇಷ ಭಾಷಣ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳಲು ಅರ್ಜಿದಾರರು ತಮ್ಮನ್ನು ಸಂಪರ್ಕಿಸಿಲ್ಲ. ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಂತಹ ನಡವಳಿಕೆಯನ್ನು ತಡೆಹಿಡಿಯಬೇಕು’ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

ADVERTISEMENT

ಪತ್ರಕರ್ತ ಕುರ್ಬಾನ್ ಅಲಿ ಮತ್ತು ಪಟ್ನಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮತ್ತು ಹಿರಿಯ ವಕೀಲರಾದ ಅಂಜನಾ ಪ್ರಕಾಶ್ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿರುವುದರ ಬಗ್ಗೆ ಎಸ್‌ಐಟಿಯಿಂದ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಕಳೆದ ವರ್ಷ ಡಿಸೆಂಬರ್ 19 ರಂದು ಹಿಂದೂ ಯುವ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದ್ವೇಷಪೂರಿತ ಭಾಷಣ ಮಾಡಲಾಗಿದೆ ಎಂದು ಆರೋಪಿಸಿ ಕೆಲವು ದೂರುಗಳನ್ನು ದಾಖಲಿಸಲಾಗಿದೆ. ಪ್ರಕರಣದ ಎಲ್ಲಾ ದೂರುಗಳ ಕುರಿತು ಸಮಗ್ರ ತನಿಖೆ ನಡೆಸಲಾಗಿದ್ದು, ವಿಡಿಯೊ ಕುರಿತು ಸಹ ಮೌಲ್ಯಮಾಪನ ಮಾಡಲಾಗಿದೆ. ದೂರುದಾರರು ಮಾಡಿದ ಆರೋಪದ ಪ್ರಕಾರ ಯಾವುದೇ ವಿಷಯ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಾಷಣದಲ್ಲಿ ಮುಸ್ಲಿಮರನ್ನು ಹತ್ಯೆ ಮಾಡುವ ಬಗ್ಗೆ ಕರೆ ನೀಡಲಾಗಿದೆ ಎಂದು ಅರ್ಥೈಸುವ ಅಥವಾ ಅರ್ಥೈಸಬಹುದಾದ ಪದಗಳ ಬಳಕೆಯಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.

‘ನಾವು ಯಾವುದೇ ಆಧಾರರಹಿತ ಹೇಳಿಕೆ ನೀಡಿಲ್ಲ. ಸುಪ್ರೀಂ ಕೋರ್ಟ್‌ ಎದುರು ಸೂಕ್ತ ಪ್ರತಿಕ್ರಿಯೆ ಸಲ್ಲಿಸುತ್ತೇವೆ’ ಎಂದು ದೂರುದಾರರಲ್ಲಿ ಒಬ್ಬರಾದ ಅಲಿ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 17 ರಂದು ಹರಿದ್ವಾರದಲ್ಲಿ ಯತಿ ನರಸಿಂಹಾನಂದ ಮತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಈ ಪ್ರಕರಣದ ತನಿಖೆಯ ಪ್ರಸ್ತುತ ಸ್ಥಿತಿಯ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಉತ್ತರಾಖಂಡ ಸರ್ಕಾರಕ್ಕೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್‌ 22ಕ್ಕೆ ಪಟ್ಟಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.