ADVERTISEMENT

ಹಾಥರಸ್‌ ಪ್ರಕರಣ: ವರದಿ ಸಲ್ಲಿಸಲು ಎಸ್‌ಐಟಿಗೆ 10 ದಿನಗಳ ಹೆಚ್ಚಿನ ಗಡುವು

ಏಜೆನ್ಸೀಸ್
Published 7 ಅಕ್ಟೋಬರ್ 2020, 5:41 IST
Last Updated 7 ಅಕ್ಟೋಬರ್ 2020, 5:41 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌   

ಲಖನೌ: ಹಾಥರಸ್‌ ಅತ್ಯಾಚಾರಕ್ಕೆ ಸಂಬಂಧಿಸಿದ ವರದಿ ನೀಡಲು ಹತ್ತು ದಿನಗಳ ಹೆಚ್ಚಿನ ಗಡುವನ್ನು ಯೋಗಿ ಆದಿತ್ಯನಾಥ್ ಸರ್ಕಾರ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ನೀಡಿದೆ.

'ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಯನ್ನು ಎಸ್‌ಐಟಿ ಬುಧವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಆದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ವರದಿ ಸಲ್ಲಿಕೆಗೆ ನೀಡಿದ್ದ ಗಡುವನ್ನು ಮುಂದಿನ 10 ದಿನಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ' ಎಂದು ಗೃಹ ಇಲಾಖೆಯ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್‌ ಅವಸ್ಥಿ ಹೇಳಿದ್ದಾರೆ.

ಮೂರು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿದ್ದ ಉತ್ತರ ಪ್ರದೇಶದ ಹಾಥರಸ್‌ನ 19 ವರ್ಷದ ಯುವತಿ ದೆಹಲಿಯಲ್ಲಿ ಮಂಗಳವಾರ ಮೃತಪಟ್ಟಿದ್ದರು. ಮೂಳೆ ಮುರಿತ ಮತ್ತು ನಾಲಿಗೆಯು ತುಂಡಾಗಿದ್ದ ಯುವತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದರು.

ADVERTISEMENT

ಮೃತಪಟ್ಟ ಯುವತಿಯ ಅಂತ್ಯಕ್ರಿಯೆಯನ್ನು ಉತ್ತರ ಪ್ರದೇಶ ಪೊಲೀಸರು ನಡುರಾತ್ರಿಯಲ್ಲೇ ಮಾಡಿ ಮುಗಿಸಿದ್ದರು. ಅಂತ್ಯಕ್ರಿಯೆಗೆ ತೆರಳಲು ತಮಗೂ ಅವಕಾಶ ನೀಡಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಆರೋಪಿಸಿದ್ದರು. ಈ ಘಟನೆಯು ದೇಶದಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.