ADVERTISEMENT

ಉತ್ತರ ಪ್ರದೇಶ: ರಾಷ್ಟ್ರಪತಿ ಆಡಳಿತ ಹೇರಲು ವಕೀಲರ ಆಗ್ರಹ

ಪಿಟಿಐ
Published 2 ಅಕ್ಟೋಬರ್ 2020, 5:58 IST
Last Updated 2 ಅಕ್ಟೋಬರ್ 2020, 5:58 IST
 ಸಂತ್ರಸ್ತೆ ಅಂತ್ಯಕ್ರಿಯೆ ನಡೆಸಿದ ಪೊಲೀಸರು
 ಸಂತ್ರಸ್ತೆ ಅಂತ್ಯಕ್ರಿಯೆ ನಡೆಸಿದ ಪೊಲೀಸರು   

ಗಾಜಿಯಾಬಾದ್‌: ಹಾಥರಸ್‌ ಸಾಮೂಹಿಕ ಅತ್ಯಾಚಾರ ಮತ್ತು ಪೋಷಕರನ್ನು ಕೂಡಿಹಾಕಿ ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ದೇಶದೆಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಗಾಜಿಯಾಬಾದ್ ವಕೀಲರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವಂತೆ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರವನ್ನು ವಿಸರ್ಜನೆಗೊಳಿಸಿ, ರಾಷ್ಟ್ರಪತಿ ಆಡಳಿತವನ್ನು ಹೇರಬೇಕು. 19 ವರ್ಷದ ಪರಿಶಿಷ್ಟ ಜಾತಿ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ದೇಶದ ಹೆಸರನ್ನು ಕಳಂಕಿತಗೊಳಿಸಿದೆ ಎಂದು ವಕೀಲರು ಹೇಳಿದರು.

ಸಿವಿಲ್‌ ನ್ಯಾಯಾಲಯದಿಂದ ಜಿಲ್ಲಾಧಿಕಾರಿ ಕಚೇರಿ ತನಕ ವಕೀಲರು ಮೆರವಣಿಗೆ ನಡೆಸಿದರು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಿರುದ್ಧ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಜಯ್‌ ಶಂಕರ್‌ ಪಾಂಡೆ ಅವರ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ನಡೆಯುತ್ತಿರುವ ಅಪರಾಧವನ್ನು ತಡೆಯಲು ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ವಿಫಲವಾಗಿದೆ. ಅಲ್ಲದೆ ಉತ್ತರ ಪ್ರದೇಶದ ಪೊಲೀಸರು, ಅಪರಾಧಗಳನ್ನು ಮರೆಮಾಚಲು ಪ್ರಕರಣದ ಸಾಕ್ಷ್ಯಗಳನ್ನು ಅಳಿಸುತ್ತಿದ್ದಾರೆ. ಹಾಥರಸ್‌‌ ಪ್ರಕರಣದಲ್ಲಿ ಬಲವಂತವಾಗಿ ಸಂತ್ರಸ್ತೆ ಯ ಅಂತ್ಯಕ್ರಿಯೆಯನ್ನು ನಡೆಸಿದರು ಎಂದು ವಕೀಲ ನಹ್ರಾ ಸಿಂಗ್‌ ಯಾದವ್ ಅವರು ಆರೋಪಿಸಿದರು.

ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಈ ಪ್ರಕರಣವನ್ನು ಇತರೆ ರಾಜ್ಯದವಿಶೇಷ ತ್ವರಿತ ವಿಚಾರಣಾ ನ್ಯಾಯಾಲಯಕ್ಕೆ ನೀಡಬೇಕು. ಉತ್ತರ ಪ್ರದೇಶ ಸರ್ಕಾರವು ಸಂತ್ರಸ್ತೆ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.