ADVERTISEMENT

ದೆಹಲಿ ವಾಯುಮಾಲಿನ್ಯ ಕಡಿವಾಣಕ್ಕೆ ಸುಗ್ರೀವಾಜ್ಞೆ

ನಿಯಮ ಉಲ್ಲಂಘನೆಗೆ ಐದು ವರ್ಷ ಜೈಲು ಅಥವಾ ₹1 ಕೋಟಿ ದಂಡ

ಪಿಟಿಐ
Published 29 ಅಕ್ಟೋಬರ್ 2020, 12:30 IST
Last Updated 29 ಅಕ್ಟೋಬರ್ 2020, 12:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಎನ್‌ಸಿಆರ್‌ ಪ್ರದೇಶದಲ್ಲಿ ಪ್ರತಿ ವರ್ಷವು ಕಾಡುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಸುಗ್ರೀವಾಜ್ಞೆ ಹೊರಡಿಸಿದೆ. ‌

ಕಾನೂನಿನಲ್ಲಿರುವ ನಿಯಮಗಳನ್ನು ಉಲ್ಲಂಘಿಸಿದರೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ ₹1 ಕೋಟಿ ದಂಡ ಅಥವಾ ಎರಡೂ ಶಿಕ್ಷೆಯನ್ನು ವಿಧಿಸುವ ಕುರಿತು ಸುಗ್ರೀವಾಜ್ಞೆಯಲ್ಲಿ ಕಾನೂನು ಸಚಿವಾಲಯವು ಉಲ್ಲೇಖಿಸಿದೆ.

‘ರಾಷ್ಟ್ರ ರಾಜಧಾನಿ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಗುಣಮಟ್ಟ ನಿರ್ವಹಣೆ ಆಯೋಗ ಸುಗ್ರಿವಾಜ್ಞೆ–2020’ರ ಹೆಸರಿನಲ್ಲಿ ಇದನ್ನು ಜಾರಿಗೊಳಿಸಲಾಗಿದ್ದು, ಬುಧವಾರ ಇದಕ್ಕೆ ರಾಷ್ಟ್ರಪತಿಯವರು ಒಪ್ಪಿಗೆ ನೀಡಿದ್ದಾರೆ.

ADVERTISEMENT

ಸುಗ್ರೀವಾಜ್ಞೆ ಅನ್ವಯ ‘ಪಂಜಾಬ್‌, ಹರಿಯಾಣ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ, ದೆಹಲಿ–ಎನ್‌ಸಿಆರ್‌ನ ಸುತ್ತಮುತ್ತಲಿನ ಪ್ರದೇಶ ಒಳಗೊಂಡಿದೆ. ಪರಿಸ್ಥಿತಿ ಮೇಲ್ವಿಚಾರಣೆಗೆ 20 ಸದಸ್ಯರ ಆಯೋಗ ರಚನೆಯಾಗಲಿದೆ. ಕಾನೂನಿನ ಸೂಕ್ತ ಅನುಷ್ಠಾನದ ಜವಾಬ್ದಾರಿ ಇವರ ಮೇಲಿರಲಿದೆ. ಕಾನೂನಿನಲ್ಲಿ ಇರುವ ನಿಯಮಗಳ ಉಲ್ಲಂಘನೆ ಅಥವಾ ಆಯೋಗದ ಆದೇಶ, ನಿರ್ದೇಶನ ಉಲ್ಲಂಘಿಸಿದರೆ 5 ವರ್ಷ ಜೈಲು ಶಿಕ್ಷೆ ಅಥವಾ ₹1ಕೋಟಿ ದಂಡ ವಿಧಿಸಲಾಗುವುದು’ ಎಂದು ಉಲ್ಲೇಖಿಸಲಾಗಿದೆ. ಎನ್‌ಸಿಆರ್‌ ಪ್ರದೇಶ ಹಾಗೂ ಸುತ್ತಮುತ್ತಲು ವಾಯುಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ನಿರ್ಬಂಧಿಸುವ ಅಧಿಕಾರ ಈ ಆಯೋಗಕ್ಕೆ ಇದ್ದು, ಸ್ವಯಂಪ್ರೇರಿತವಾಗಿ ಆದೇಶಗಳನ್ನು ಹೊರಡಿಸುವ ಅಧಿಕಾರ ನೀಡಲಾಗಿದೆ.

ಆಯೋಗದ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿ ಅಥವಾ ರಾಜ್ಯವೊಂದರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು ನಿಭಾಯಿಸಲಿದ್ದಾರೆ. ಪರಿಸರ ಸಚಿವಾಲಯದ ಕಾರ್ಯದರ್ಶಿಯ ಒಬ್ಬರು ಪ್ರತಿನಿಧಿ, ದೆಹಲಿ, ಪಂಜಾಬ್‌, ಹರಿಯಾಣ, ರಾಜಸ್ಥಾನ, ದೆಹಲಿ ಹಾಗೂ ಉತ್ತರ ಪ್ರದೇಶದ ಪರಿಸರ ಇಲಾಖೆಯ ಮುಖ್ಯಕಾರ್ಯದರ್ಶಿ ಅಥವಾ ಕಾರ್ಯದರ್ಶಿಗಳು ಇದರಲ್ಲಿ ಇರಲಿದ್ದಾರೆ. ಜೊತೆಗೆ ತಾಂತ್ರಿಕ ಸದಸ್ಯರು, ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳು, ಇಸ್ರೊ ನಾಮನಿರ್ದೇಶಿತ ಒಬ್ಬರ ತಾಂತ್ರಿಕ ಸದಸ್ಯ ಹಾಗೂ ಮೂರು ಎನ್‌ಜಿಒದ ಪ್ರತಿನಿಧಿಗಳು ಇರಲಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಮಾಹಿತಿ: ದೆಹಲಿಯಲ್ಲಿ ಮಾಲಿನ್ಯಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ಞೆಯೊಂದನ್ನು ಸಿದ್ಧಪಡಿಸಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

‘ಈ ವಿಷಯಕ್ಕೆ ಸಂಬಂಧಿಸಿ ಯಾವುದೇ ನಿರ್ದೇಶನಗಳನ್ನು ನೀಡುವ ಮೊದಲು ಈ ಸುಗ್ರೀವಾಜ್ಞೆಯನ್ನು ಪರಿಶೀಲಿಸಬೇಕು’ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರಿದ್ದ ಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.