ADVERTISEMENT

ಪೊಲೀಸರಿಗೆ ಪತ್ರ ಬರೆದ ತಬ್ಲಿಗಿ ಜಮಾತ್‌ ಮುಖ್ಯಸ್ಥ ಸಾದ್‌: ಏನಿದೆ ಅದರಲ್ಲಿ?

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 11:58 IST
Last Updated 18 ಏಪ್ರಿಲ್ 2020, 11:58 IST
   

ದೆಹಲಿ: ನಿಜಾಮುದ್ದೀನ್‌ನ ತಬ್ಲಿಗಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಕಂಧಲ್ವಿ ದೆಹಲಿ ಪೊಲೀಸ್ ಅಪರಾಧ ವಿಭಾಗಕ್ಕೆ ಗುರುವಾರ ಪತ್ರ ಬರೆದಿದ್ದಾರೆ. ತಮ್ಮ ವಿರುದ್ಧದ ಪ್ರಕರಣದಲ್ಲಿ ಸಹಕರಿಸಲು ಸಿದ್ಧರಿರುವುದಾಗಿಯೂ ಮತ್ತು ಈಗಾಗಲೇ ಎರಡು ನೋಟಿಸ್‌ಗಳಿಗೆ ತಾವು ಉತ್ತರಿಸಿ ತನಿಖೆಯಲ್ಲಿ ಭಾಗಿಯಾಗಿರುವುದಾಗಿಯೂ ಸಾದ್‌ ತಿಳಿಸಿದ್ದಾರೆ.

ಅಲ್ಲದೆ, ತನ್ನ ವಿರುದ್ಧದ ಎಫ್‌ಐಆರ್‌ನಲ್ಲಿ ಹೊಸದಾಗಿ ಸೇರಿಸಲಾಗಿರುವ ಸೆಕ್ಷನ್‌ನ ಕುರಿತು ಮಾಹಿತಿ ನೀಡುವಂತೆಯೂ, ಮತ್ತು ಅದರ ಪ್ರತಿಯನ್ನು ಒದಗಿಸುವಂತೆಯೂ ಸಾದ್‌ ಗುರುವಾರ ದೆಹಲಿ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

ಏಪ್ರಿಲ್ 1 ಮತ್ತು 2 ರಂದು ಎರಡು ನೋಟಿಸ್‌ಗಳು ತಮಗೆ ಬಂದಿದ್ದು, ಅವುಗಳಿಗೆ ಈಗಾಗಲೇ ಉತ್ತರಿಸುವ ಮೂಲಕ ತನಿಖೆಯಲ್ಲಿ ಭಾಗಿಯಾಗಿರುವುದಾಗಿ ಸಾದ್‌ ತಿಳಿಸಿದ್ದಾರೆ. ತಾವು ತನಿಖೆಗೆ ಸಹಕರಿಸಲು ಸದಾ ಸಿದ್ಧರಿರುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ತಬ್ಲಿಗಿ ಜಮಾತ್‌ ಸಮಾವೇಶ ಆಯೋಜಿಸಿದ ಹಿನ್ನೆಲೆಯಲ್ಲಿ ಸಾದ್‌ ಸೇರಿದಂತೆ ಏಳು ಮಂದಿಯ ವಿರುದ್ಧ ಮಾರ್ಚ್‌ 31ರಂದು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ, ಎಫ್‌ಆರ್‌ಆರ್‌ ಹಾಕಿದ್ದರು. ಅಲ್ಲದೆ, ಅಕ್ರಮ ಹಣ ವರ್ಗಾವಣೆ ಆರೋಪದಡಿ ಸಾದ್‌ ವಿರುದ್ದ ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.