ADVERTISEMENT

ಕೆನ್ಯಾದಲ್ಲಿ ಪತ್ರಕರ್ತ ನಾಪತ್ತೆ: ಕೇಂದ್ರದ ಪ್ರತಿಕ್ರಿಯೆಗೆ ಸೂಚನೆ 

ಪಿಟಿಐ
Published 12 ಜುಲೈ 2023, 15:57 IST
Last Updated 12 ಜುಲೈ 2023, 15:57 IST
   

ನವದೆಹಲಿ: ಕಳೆದ ವರ್ಷದಿಂದ ತನ್ನ ಸಹೋದರ, ಪತ್ರಕರ್ತ ಜುಲ್ಫಿಕರ್ ಅಹ್ಮದ್ ಖಾನ್ ಕಾಣೆಯಾಗಿದ್ದಾರೆ ಮತ್ತು ಕೆನ್ಯಾದಲ್ಲಿ ಬಂಧನದಲ್ಲಿದ್ದಾರೆ ಎಂದು ಅನಿಸ್ ಫಾತಿಮಾ ಜಕರಿಯಾ ಸಲ್ಲಿಸಿದ ಅರ್ಜಿ ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. 

ಅರ್ಜಿ ಕುರಿತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರು ವಿದೇಶಾಂಗ ವ್ಯವಹಾರಗಳು ಮತ್ತು ಗೃಹ ಸಚಿವಾಲಯಗಳಿಗೆ ನೋಟಿಸ್ ನೀಡಿದ್ದು, ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಆಗಸ್ಟ್‌ಗೆ ನಿಗದಿಪಡಿಸಿದೆ. 

‘ಸಹೋದರ ಖಾನ್ ಅವರು 2022ರ ಜೂನ್ 24 ರಂದು ಪ್ರವಾಸಿ ವೀಸಾದಲ್ಲಿ ಕೆನ್ಯಾ ತೆರಳಿದ್ದರು. ಜುಲೈ 22 ರಂದು ಖಾನ್ ಮತ್ತು ಅವರ ಸ್ನೇಹಿತ ಓಲೆ ಸೆರೆನಿ ವೆಸ್ಟ್‌ ಲ್ಯಾಂಡ್ಸ್‌ನಲ್ಲಿದ್ದರು. ಪೊಲೀಸ್ ಅಧಿಕಾರಿಗಳು ಎಂದು ಹೇಳಿ ಕೆಲವರು ಅವರ ವಾಹನ ತಡೆದು ಅಪ‍ಹರಿಸಿದ್ದಾರೆ’ ಎಂದು ಫಾತಿಮಾ ಅರ್ಜಿಯಲ್ಲಿ ತಿಳಿಸಿದ್ದಾರೆ.  

ADVERTISEMENT

ಕಳೆದ ವರ್ಷ ಜುಲೈನಲ್ಲಿ ಕೆನ್ಯಾದಲ್ಲಿ ನಾಪತ್ತೆಯಾಗಿದ್ದ 49 ವರ್ಷದ ಖಾನ್ ಬಾಲಾಜಿ ಟೆಲಿಫಿಲಂ ಮಾಜಿ ಸಿಒಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಆಗಿದ್ದರು ಮತ್ತು ಇರೋಸ್, ಸ್ಟಾರ್ ಟಿವಿ ಇಂಡಿಯಾ ಮತ್ತು ವಾರ್ನರ್ ಬ್ರದರ್ಸ್‌ನಲ್ಲಿ ಕೆಲಸ ಮಾಡಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.